ಮೂಲತಃ ಅಥಣಿಯ, ಆದರೆ ಉದ್ಯೋಗ ನಿಮಿತ್ತ ಕರ್ನಾಟಕದ ಹೃದಯ ಭಾಗದಲ್ಲಿರುವ ಗದಗ ಜಿಲ್ಲೆಯ ಪುಟ್ಟ ತಾಲೂಕು ಮುಂಡರಗಿಯಲ್ಲಿ ವಾಸವಾಗಿರುವ ಸುರೇಶ್ ಮಾಳಿ ಅವರ ಪುತ್ರ ವಿಶ್ವನಾಥ್ ಮುಂಡರಗಿಯಲ್ಲಿಯೇ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾನೆ. ತನ್ನ ಅಸೀಮ ಆಸಕ್ತಿ ಮತ್ತು ಶ್ರದ್ಧೆಯ ಪರಿಣಾಮವಾಗಿ ಭಾರತದ ಅತ್ಯುನ್ನತ ಸಂಶೋಧನಾ ಸಂಸ್ಥೆಯಲ್ಲಿ ಒಂದಾದ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸೆಂಟರ್‌ನಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ಭಾರತ ದೇಶದ ಪ್ರತಿಭಾನ್ವಿತ 20 ಜನ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿ ಆಯ್ಕೆಯಾಗಿದ್ದಾನೆ. ವಿಶ್ವನಾಥ್ ಸುರೇಶ್ ಮಾಳಿ ಸಾಧನೆಯ ಹಾದಿ ಅದ್ಭುತವಾದದ್ದು.
ವಿಜ್ಞಾನ ವಿಷಯವನ್ನು ಹೃದಯದಿಂದ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದಾಗ ಕಲಿಕೆ ಎಂಬುದು ಓರ್ವ ವ್ಯಕ್ತಿಯ ವರ್ತನೆ, ಒಳನೋಟ, ಆಸಕ್ತಿ ಮತ್ತು ಚಿಂತನೆಗಳ ಒಟ್ಟು ಒಳಹೂರಣವನ್ನು ಹೊಂದಿರುವ ತಪಸ್ಸಿನಂತೆ ಎಂದು ಭಾವಿಸಿದ ವಿಶ್ವನಾಥ್ ಎಲ್ಲಿಯೂ ಎಡವದೆ ತನ್ನ ಕಲಿಕೆಯನ್ನು ಮುಂದುವರೆಸಿ ತನ್ನ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದ. ತಂದೆ ಸುರೇಶ್ ಮಾಳಿ ತಾಲೂಕಿನ ನಾಗರಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದು, ತಾಯಿ ಪ್ರತಿಮಾ ಗೃಹಿಣಿ. ಓರ್ವ ಕಿರಿಯ ಸಹೋದರ ಪ್ರತೀಕ ಪಿಯುಸಿ ಓದುತ್ತಿದ್ದಾನೆ.
ದೆಹಲಿ ವಿಶ್ವವಿದ್ಯಾಲಯದ ದೆಹಲಿಯ ಪ್ರಸಿದ್ಧ ಸೆಂಟ್ ಸ್ಟೀಫನ್ ಕಾಲೇಜಿನಲ್ಲಿ ಪದವಿ ಅಧ್ಯಯನದೊಂದಿಗೆ ಪ್ರಾರಂಭವಾದ ಈತನ ವಿಜ್ಞಾನದ ಆಸಕ್ತಿ ಅದರಲ್ಲೂ ಮುಖ್ಯವಾಗಿ ಭೌತಶಾಸ್ತ್ರದಲ್ಲಿನ ತೀವ್ರ ಆಸಕ್ತಿ ಹೆಚ್ಚಿನ ಅಧ್ಯಯನ ಮಾಡಲು ಪ್ರೇರೇಪಿಸಿತು. ಈ ತಾತ್ವಿಕ ಆಕರ್ಷಣೆಯು ಮುಂದೆ ಐಐಟಿ ರೂಪರ್ ಪಂಜಾಬ್‌ನಲ್ಲಿ ತಮ್ಮ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಮುಂದುವರಿಸಲು ಪ್ರೇರೇಪಿಸಿತು.
ವಿಜ್ಞಾನ ಕೂಡ ಆಧ್ಯಾತ್ಮದಂತೆ ತತ್ವಜ್ಞಾನದಂತೆ, ವಿಜ್ಞಾನವೂ ಕೂಡ ತೀವ್ರ ತಾಳ್ಮೆ ಮತ್ತು ತಾಕತ್ತನ್ನು ಬೇಡುತ್ತದೆ ಎಂದು ವಿಶ್ವನಾಥ್ ಹೇಳುತ್ತಾರೆ. ಪ್ರತಿದಿನವೂ ಹೊಸ ಸವಾಲುಗಳು, ಸ್ಪರ್ಧೆಯ ಒತ್ತಡ, ಆತ್ಮಶಂಕೆಗಳ ನಡುವೆಯೂ ಕೂಡ ಭರವಸೆಯನ್ನು ಕಳೆದುಕೊಳ್ಳದ ವಿಶ್ವನಾಥ್ ಹೊಸ ಕಲಿಕೆಗೆ ಸವಾಲುಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡರು. ಪರಿಣಾಮವಾಗಿ ಟಿಐಎಫ್‌ಆರ್ ಪ್ರವೇಶ ಸಾಧನೆಯ ಮೊದಲ ಮೆಟ್ಟಿಲನ್ನು ಹತ್ತಿದರು.
ಟಿಐಎಫ್‌ಆರ್‌ನಲ್ಲಿ ಓದಲು ಮೊದಲು ಅಲ್ಲಿಯ ಪ್ರವೇಶ ಪರೀಕ್ಷೆಯನ್ನು ಪಾಸ್ ಆಗಬೇಕು. ಈ ಪ್ರವೇಶ ಪರೀಕ್ಷೆ ಲಿಖಿತವಾಗಿದ್ದು, ಇಲ್ಲಿ ಪಾಸಾದ ನಂತರ ಎರಡನೇ ಸುತ್ತಿನಲ್ಲಿ ಮೌಖಿಕ ಇಲ್ಲವೇ ಮತ್ತೊಂದು ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ ಪರೀಕ್ಷೆ ಇಲ್ಲದೆ ಪ್ರವೇಶ ಪಡೆಯಲು ಜೆಸ್ಟ್, ಗೇಟ್, ನೆಟ್ ಪರೀಕ್ಷೆಗಳಲ್ಲಿ ಭೌತಶಾಸ್ತç, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರಬೇಕು.
ಟಿಐಎಫ್‌ಆರ್‌ನ ಫೆಲೋಶಿಪ್ ಪಡೆದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗೆ ಪ್ರತಿ ತಿಂಗಳು 16 ಸಾವಿರ ರೂಗಳು, ಪಿಎಚ್‌ಡಿ ಫೆಲೋಶಿಪ್‌ನ ವಿದ್ಯಾರ್ಥಿಗಳಿಗೆ ಮೊದಲ ವರ್ಷ ಪ್ರತಿ ತಿಂಗಳು 21 ಸಾವಿರ, ಎರಡನೇ ವರ್ಷ 35 ಸಾವಿರ ಪ್ರತಿ ತಿಂಗಳು ದೊರೆಯುತ್ತದೆ. ಭಾರತದಾದ್ಯಂತ ಟಿಐಎಫ್‌ಆರ್‌ನ ಒಟ್ಟು ಏಳು ಸಂಶೋಧನಾ ಕೇಂದ್ರಗಳಿದ್ದು, ಮುಖ್ಯ ಕೇಂದ್ರವು ಮುಂಬೈಯಲ್ಲಿ ಇದೆ. ಅದಲ್ಲದೆ ಹೋಮಿ ಬಾಬಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಎಂಬ ಶಿಕ್ಷಣ ಸಂಸ್ಥೆಯು ಕೂಡ ಮುಂಬೈಯಲ್ಲಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ನ್ಯಾಷನಲ್ ಸೆಂಟರ್ ಫಾರ್ ರೇಡಿಯೋ ಅಸ್ಟ್ರೋ ಫಿಸಿಕ್ಸ್ ಕೇಂದ್ರವಿದ್ದು, ಹೈದರಾಬಾದ್‌ನಲ್ಲಿ ಕೂಡ ಟಿಐಎಫ್‌ಆರ್‌ನ ಶಿಕ್ಷಣ ಕೇಂದ್ರವಿದೆ. ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (ಅಪ್ಲಿಕೇಶನ್ ಮೆಥೆಮೆಟಿಕ್ಸ್), ಐಸಿಟಿಎಸ್ (ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥೆರಾಟಿಕಲ್ ಸೈನ್ಸಸ್), ಎನ್‌ಸಿಬಿಎಸ್ (ನ್ಯಾಷನಲ್ ಸೆಂಟರ್ ಫಾರ್ ಬಯಾಲಜಿಕಲ್ ಸೈನ್ಸ್ ) ಒಟ್ಟು ಮೂರು ಕೇಂದ್ರಗಳಿದ್ದು, ಟಿಐಎಫ್‌ಆರ್‌ನಲ್ಲಿ ಶಿಕ್ಷಣ ಪಡೆಯಲು ಬಯಸುವವರಿಂದ ಸಂಸ್ಥೆಯು ಗುಣಮಟ್ಟಕ್ಕೆ ಆದ್ಯತೆ ನೀಡುತ್ತಾರೆಯೇ ಹೊರತು ಅಗಾಧ ಪ್ರಮಾಣತೆಗಲ್ಲ.
ತತ್ವಶಾಸ್ತ್ರದಲ್ಲಿ ಬಲವಾದ ಸೆಲೆ ಮತ್ತು ನೆಲೆಯನ್ನು ನಿರ್ಮಿಸಿದ ಭೌತಿಕ ವಿಶ್ವದ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಯತ್ನಶೀಲತೆ ಮತ್ತು ಆ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವುದು ತನ್ನ ಗುರಿ ಎಂದು ಹೇಳುವ ವಿಶ್ವನಾಥನ ಆತ್ಮವಿಶ್ವಾಸದ ಮಾತುಗಳು ಸಂತಸ ಮತ್ತು ಹೆಮ್ಮೆಯನ್ನು ಮೂಡಿಸುತ್ತದೆ.
ಅತ್ಯಂತ ಚಿಕ್ಕ ತಾಲೂಕು ಪ್ರದೇಶವೊಂದರಲ್ಲಿ ಬೆಳೆದು ವೈಯುಕ್ತಿಕ ಪರಿಶ್ರಮ, ಶ್ರದ್ಧೆ ಮತ್ತು ಶ್ರಮದ ಫಲಶ್ರುತಿಯಾಗಿ ವಿಶ್ವ ಭೂಪಟದಲ್ಲಿ ವಿಶ್ವನಾಥ್ ಕಾಣಿಸಿಕೊಳ್ಳುತ್ತಿರುವುದು ಯುವ ಸಮುದಾಯಕ್ಕೆ ಸ್ಪೂರ್ತಿದಾಯಕ ವಿಷಯವಾಗಿದೆ. ಇಂದಿನ ಮೊಬೈಲ್ ಮತ್ತು ಇಂಟರ್ನೆಟ್ ಯುಗದಲ್ಲಿ ರೀಲ್ ಮತ್ತು ಗೇಮ್ಸ್ಗಳಲ್ಲಿ ತೊಡಗಿಸಿಕೊಂಡು ತಮ್ಮ ರಿಯಲ್ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವ ಯುವಕರ ಮಧ್ಯದಲ್ಲಿ ಸಂಶೋಧನೆಗಾಗಿಯೇ ತಮ್ಮ ಬದುಕನ್ನು ಮುಡುಪಾಗಿರುವ ವಿಶ್ವನಾಥ್ ಅವರ ಸಾಧನೆ ಹೀಗೆಯೇ ಮುಂದುವರೆಯಲಿ. ಅವರ ಸಾಧನೆಯಿಂದ ಇನ್ನೂ ಸಾಕಷ್ಟು ಜನ ಪ್ರೇರೇಪಿತರಾಗಲಿ. ಸಮಾಜದ ಹೊಸ ತಲೆಮಾರಿನ ಮಕ್ಕಳಿಗೆ ದಾರಿ ದೀಪವಾಗಲಿ ಎಂದು ಹಾರೈಸುವ…
– ವೀಣಾ ಹೇಮಂತ್‌ಗೌಡ ಪಾಟೀಲ್.
ಮುಂಡರಗಿ.