ಯಾದಗಿರಿ: ಜಿಲ್ಲೆ ಮತ್ತೊಮ್ಮೆ ಭಕ್ತಿಭಾವದಲ್ಲಿ ತೇಲಿತು. ಕಲ್ಯಾಣ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ಅಬ್ಬೆತುಮಕೂರುನಲ್ಲಿ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭವ್ಯವಾಗಿ ನೆರವೇರಿತು.
ಬೆಳಿಗ್ಗೆ ರಥಾಂಗ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಡಾ. ಗಂಗಾಧರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದವು. ನಂತರ ನಂದಿಕೋಲು ನೃತ್ಯ ಹಾಗೂ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನ ಜಾತ್ರೆಗೆ ವಿಶೇಷ ಮೆರುಗು ತಂದವು.
ಸಂಜೆ ನಡೆದ ರಥೋತ್ಸವದಲ್ಲಿ ಭಕ್ತರ ಜಯಘೋಷ ಗಗನಮುಟ್ಟಿತು. ಭಕ್ತರು ಕಾರಿಕಾ, ಉತ್ತತ್ತಿ ಹಾಗೂ ಬಾಳೆಹಣ್ಣುಗಳನ್ನು ಅರ್ಪಿಸಿ ತಮ್ಮ ಭಕ್ತಿ ವ್ಯಕ್ತಪಡಿಸಿದರು.
ಜಾತ್ರೆಯಲ್ಲಿ ಸಚಿವರಾದ ಶರಣಬಸ್ಸಪ್ಪಗೌಡ ದರ್ಶನಾಪುರ, ರಾಮಲಿಂಗಾರೆಡ್ಡಿ, ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಿಂದಲೂ ಅಪಾರ ಭಕ್ತರು ಆಗಮಿಸಿದ್ದು, ಅಬ್ಬೆತುಮಕೂರು ಕ್ಷೇತ್ರ ಭಕ್ತ ಸಾಗರವಾಗಿ ಮಾರ್ಪಟ್ಟಿತ್ತು.



