ವಿಜಯಸಾಕ್ಷಿ ಸುದ್ದಿ, ಗದಗ : ಇತಿಹಾಸದ ಅದ್ಯಯನದಿಂದ ನಮ್ಮ ದೇಶದ ಗಣಿತಶಾಸ್ತ್ರ, ವಿಜ್ಞಾನಶಾಸ್ತ್ರ, ಖಗೋಳಶಾಸ್ತ್ರ, ಭೂಗೋಳಶಾಸ್ತ್ರದಲ್ಲಿ ಎಷ್ಟು ಅಗಾಧವಾದ ಜ್ಞಾನ ಹೊಂದಿದ್ದರು ಎಂಬುದನ್ನು ಮಂದಿರದ ವಾಸ್ತುಶಿಲ್ಪ ಕಲೆಯ ಮೂಲಕ ತಿಳಿಯಬಹುದು ಎಂದು ಪ್ರೊ. ಗಣೇಶ ಚಲವಾದಿ ಹೇಳಿದರು.
ಅವರು ವಿಜಯ ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಇತಿಹಾಸ ಕ್ಷೇತ್ರಗಳ ಅಧ್ಯಯನಕ್ಕಾಗಿ ಲಕ್ಕುಂಡಿಯ ಜೈನ್ ದೇವಾಲಯಕ್ಕೆ ಭೇಟಿ ನೀಡಿದಾಗ ಇತಿಹಾಸ ಪರಿಚಯಿಸಿ ಮಾತನಾಡಿದರು.
ಲಕ್ಕುಂಡಿಯ ಗ್ರೇಟರ್ ಜೈನ್ ದೇವಾಲಯ 11ನೇ ಶತಮಾನದ ಆರಂಭಿಕ ಮಹಾವೀರ ದೇವಾಲಯವಾಗಿದೆ.
ವಾಸ್ತುಶಿಲ್ಪಗಳು ಚಾಲುಕ್ಯರ ಕಾಲದ ವೈಭವವನ್ನು ಪ್ರತಿಬಿಂಬಿಸುತ್ತವೆ. ಆಗಿನ ಕಾಲದ ಶಿಲ್ಪಿಗಳಿಗೆ ವಾಸ್ತುಶಾಸ್ತ್ರದ ಬಗ್ಗೆ ಅಂದರೆ ಇಂದಿನ ಇಂಜಿನಿಯರಿಂಗ್ ಕುರಿತು ಅಗಾಧ ಜ್ಞಾನವಿತ್ತು. ಆದ್ದರಿಂದ ವಿದ್ಯಾರ್ಥಿಗಳು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಆ ಸ್ಥಳದ ಬಗ್ಗೆ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಅಶೋಕ ಅಕ್ಕಿ ಮಾತನಾಡಿ, ಈ ಕ್ಷೇತ್ರ ಅಧ್ಯಯನದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಆಸಕ್ತಿ, ಉಲ್ಲಾಸ ಹಾಗೂ ಶಿಸ್ತಿನೊಂದಿಗೆ ಗುರಿ ಸಾಧನೆಗೆ ಪ್ರೇರಣಯಾಗಬಹುದು ಎಂಬ ವಿಚಾರದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊ. ಶ್ರೀದೇವಿ ವಿ.ವಾಯ್, ಪುರಾತತ್ವ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.