ವಿಜಯಸಾಕ್ಷಿ ಸುದ್ದಿ, ಹೊಂಬಳ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಆರ್. ಬುರಡಿ ಅವರ ನೇತೃತ್ವದಲ್ಲಿ ಹೊಂಬಳ ಗ್ರಾಮದ ಶ್ರೀ ಶಂಕರಲಿಂಗ ಪ್ರೌಢಶಾಲೆಯ ವಿದ್ಯಾರ್ಥಿಗಳ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳ ಅಧ್ಯಯನ ಕ್ರಮ ಪರಿಶೀಲಿಸಿ ಮಾರ್ಗದರ್ಶನ ಮಾಡಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ವಿದ್ಯಾರ್ಥಿಗಳಿಗೆ ಓದುವಂತೆ ಪ್ರೇರೇಪಿಸುವುದರೊಂದಿಗೆ ಶಾಲೆಯನ್ನು ತಪ್ಪಿಸದಂತೆ ತಿಳಿವಳಿಕೆ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರು.
ಕಾರ್ಯಕ್ರಮದಲ್ಲಿ ಶ್ರೀ ಶಂಕರಲಿಂಗ ಪ್ರೌಢಶಾಲೆಯ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು, ಮುಖ್ಯಾಧ್ಯಾಪಕರಾದ ಸುನೀಲ್ ಅಂಬೇಕರ್, ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪ ನಿರ್ದೇಶಕರನ್ನು ಪಾಲಕರು ಸಂತೋಷದಿಂದ ಬರಮಾಡಿಕೊಂಡು ತಮ್ಮ ಮಕ್ಕಳನ್ನು ಶಾಲೆಗೆ ತಪ್ಪದೇ ಕಳುಹಿಸುವುದರೊಂದಿಗೆ ಚೆನ್ನಾಗಿ ಓದಿಸುತ್ತೇವೆ ಎಂದು ಭರವಸೆ ನೀಡಿದರು.



