ಮಂಗಳೂರು:- ಧರ್ಮಸ್ಥಳ ಬುರುಡೆ ವಿಚಾರ ರಾಜ್ಯ ಅಷ್ಟೇ ಅಲ್ಲದೇ ದೇಶಾದ್ಯಂತ ಚರ್ಚೆಯಲ್ಲಿದ್ದು, ಭಕ್ತರನ್ನು ಕೆರಳಿಸಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು, ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆ್ಯಂಡ್ ಟೀಮ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದಾರೆ.
ಸಿಎಂ ಈ ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು- ವಿಜಯೇಂದ್ರ
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಜಯೇಂದ್ರ, ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದಾಗ ಬಿಜೆಪಿ ಸ್ವಾಗತ ಮಾಡಿದೆ. ತನಿಖೆ ಪಾರದರ್ಶಕವಾಗಿ ಆಗಬೇಕು, ಹುಟ್ಟಿರುವ ಅನುಮಾನಗಳು ಇತ್ಯರ್ಥ ಆಗಬೇಕು ಅಂತ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದೆವು ಎಂದರು.
ತನಿಖೆ ನಡೆಯುವ ವೇಳೆ ಅನೇಕ ಗೊಂದಲಗಳು, ಅಪಪ್ರಚಾರ ನಡೆಯುತ್ತಿದೆ. ಅಪಪ್ರಚಾರ ಬಗ್ಗೆ ಕಡಿವಾಣ ಹಾಕುವಂತಹ ಕೆಲಸ ಸರ್ಕಾರದಿಂದ ಆಗಬೇಕು. ಆದ್ರೆ ಸರ್ಕಾರ ಕಡಿವಾಣ ಹಾಕದೇ ಅಪಚಾರ ಎಸಗಿದೆ. ಕಡಿವಾಣ ಹಾಕದ ಸಿಎಂ ಈ ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು. ಎಡಪಂಥೀಯವರನ್ನ ಕೇಳಿ ತನಿಖೆಗೆ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದರ ಹಿಂದೆ ಎಡಪಂಥೀಯ ಸಂಘಟನೆಗಳಿವೆ ಅಂತ ಸ್ವತಃ ದಿನೇಶ್ ಗುಂಡುರಾವ್ ಹೇಳಿದ್ದಾರೆ. ಅದು ಸತ್ಯವಾದ್ರೆ ಸಮಗ್ರ ತನಿಖೆ ಆಗ್ಲಿ. ಜೊತೆಗೆ ಡಿಕೆಶಿಯವರೇ ಇದರ ಹಿಂದೆ ಷಡ್ಯಂತ್ರ ನಡೀತಿದೆ, ಸಂದರ್ಭ ಬಂದಾಗ ಷಡ್ಯಂತ ಬಯಲಿಗೆಳೆಯುತ್ತೇವೆ ಅಂತಾ ಹೇಳಿದ್ದಾರೆ. ಯಾಕೆ ಇದಕ್ಕೆ ಇನ್ನೂ ಸಂದರ್ಭ ಬಂದಿಲ್ವಾ ಅಂತಾ ಜನತೆ ಕೇಳ್ತಿದ್ದಾರೆ..? ಷಡ್ಯಂತ್ರ ಯಾರು ಮಾಡ್ತಿದ್ದಾರೆ ಅವರನ್ನ ಬಹಿರಂಗ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಿ.ಟಿ ರವಿ, ಎಸ್.ಆರ್ ವಿಶ್ವನಾಥ್, ಛಲವಾದಿ ನಾರಾಯಣಸ್ವಾಮಿ, ಬಿವೈ ವಿಜಯೇಂದ್ರ, ಕ್ಯಾಪ್ಟನ್ ಬೃಜೇಶ್ ಚೌಟ, ವೇದವ್ಯಾಸ ಕಾಮತ್, ಗುರುರಾಜ್ ಗಂಟಹೊಳೆ, ಪ್ರತಾಪ್ ಸಿಂಹ ನಾಯಕ್, ಹರೀಶ್ ಪೂಂಜಾ, ಕಿರಣ್ ಕುಮಾರ್ ಕೊಡ್ಗಿ, ಯಶ್ ಪಾಲ್ ಸುವರ್ಣ, ಧನಂಜಯ ಸರ್ಜಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಉಪಸ್ಥಿತರಿದ್ದರು.