ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯನ್ನಾಗಿ ವಿವೇಕ್ ಯಾವಗಲ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಪುನರಾಯ್ಕೆ ಮಾಡಿದೆ.
ಕಳೆದ ವರ್ಷ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದು, ಭಾರತೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿವೇಕ್ ಯಾವಗಲ್ ಅವರನ್ನು ತೆಲಂಗಾಣ ಚುನಾವಣಾ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಮೆಹಬೂಬ್ ನಗರ, ನಾಗರ್ ಕರ್ನೂಲ್, ಜಹೀರ್ ಬಾದ್ ಒಟ್ಟು ಮೂರು ಲೋಕಸಭಾ ಕ್ಷೇತ್ರಗಳ 21 ವಿಧಾನಸಭಾ ಕ್ಷೇತ್ರಗಳ ಪೈಕಿ 16 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಯುವ ನೇತಾರ ಯಾವಗಲ್ ಅವರ ಸಂಘಟನಾತ್ಮಕ ವಿವೇಚನೆಗಳನ್ನು ಗಮನಿಸಿದ ಕಾಂಗ್ರೆಸ್ ಹೈಕಮಾಂಡ್ ಗುಜರಾತ್, ಗೋವಾ, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ಲೋಕಸಭಾ ಚುನಾವಣೆಗಳಲ್ಲೂ ಪ್ರಮುಖ ಹೊಣೆಗಾರಿಯನ್ನು ನೀಡಿತ್ತು.
ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿರುವ ವಿವೇಕ್ ಯಾವಗಲ್ ಸ್ವಂತ ಪರಿಶ್ರಮದಿಂದ ರಾಷ್ಟ್ರಮಟ್ಟದ ನಾಯಕರಿಗೂ ಚಿರಪರಿಚಿತರು.ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ ಇಂಜಿನಿಯರ್ ಆಗಿ ಪದವಿ ಮತ್ತು ದೆಹಲಿಯಲ್ಲಿ ಕಾನೂನು ಪದವಿ ಪಡೆಯುವ ಮೂಲಕ ಸುಮಾರು 12 ವರ್ಷಗಳಿಗೂ ಹೆಚ್ಚು ಕಾಲ ವಕೀಲಿ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಬೆಂಗಳೂರಿನಲ್ಲಿ ಸುಮಾರು 30-40 ಕಿರಿಯ ವಕೀಲರನ್ನು ತಮ್ಮದೇ ಆದ ಲಾ ಫರ್ಮ್ ಮೂಲಕ ಮುನ್ನಡೆಸಿಕೊಂಡು ಹೋಗುವ ಯಶಸ್ವಿ ವಕೀಲರಾಗಿದ್ದಾರೆ.
ನರಗುಂದ ಮತಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಯುವಕರ ಅಭಿಮಾನಕ್ಕೆ ಪಾತ್ರರಾಗಿ ಯುವ ನಾಯಕರಾಗಿ ಗುರುತಿಸಿಕೊಂಡು 2021ರಲ್ಲಿ ಚುನಾವಣೆ ಮೂಲಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು. ಇವರ ಪಕ್ಷ ಸಂಘಟನೆ, ದೃಷ್ಟಿಕೋನ, ರಾಜಕೀಯ ತಂತ್ರಗಾರಿಕೆ ದೆಹಲಿ ನಾಯಕರಿಗೂ ಹುಬ್ಬೇರಿಸುವಂತೆ ಮಾಡಿದ್ದು, ಸತತ ಎರಡನೇ ಬಾರಿಗೆ ಯುವ ಕಾಂಗ್ರೆಸ್ ಕಾರ್ಯದರ್ಶಿಯನ್ನಾಗಿ ಹೈಕಮಾಂಡ್ ಘೋಷಿಸಿದೆ.
ಪಕ್ಷದ ತೀರ್ಮಾನವನ್ನು ಸ್ವಾಗತಿಸಿ ಪಕ್ಷದ ಸೇವೆಗೆ ಸದಾ ಸಿದ್ಧನಾಗಿ ಕಾರ್ಯೋನ್ಮುಖನಾಗುತ್ತೇನೆ. ಪಕ್ಷವು ನನ್ನ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದ್ದು, ಕೃತಜ್ಞನಾಗಿ ಪಕ್ಷದ ಸಿದ್ಧಾಂತಕ್ಕೆ ಬದ್ಧನಾಗಿ, ಹೈ ಕಮಾಂಡ್ ನಿರ್ದೇಶನದಂತೆ ಈ ಕ್ಷಣದಿಂದಲೇ ಸಂಘಟನೆಯಲ್ಲಿ ತೊಡಗುತ್ತೇನೆ.
– ವಿವೇಕ್ ಯಾವಗಲ್.