ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸ್ವಾಮಿ ವಿವೇಕಾನಂದರು ಅಲ್ಪಾಯುಷ್ಯದಲ್ಲೇ ಅಪಾರ ಸಾಧನೆ ಮಾಡಿದ ಮಹಾನ್ ಚಿಂತಕ ಮತ್ತು ಯುಗಪುರುಷರು. ದೇಶದ ಯುವಕರ ಮನಸ್ಸು ಜಾಗೃತವಾಗಿ ರೂಪಿಸುವಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ ಅತ್ಯಂತ ಪ್ರಭಾವಶಾಲಿಯಾಗಿದೆ. ಸಾಮಾಜಿಕ ಸೇವೆಯೇ ದೇವರ ಸೇವೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದವರು ಸ್ವಾಮಿ ವಿವೇಕಾನಂದರು. ಜಾಗತಿಕ ಐಕ್ಯತೆ, ಮಾನವೀಯ ಮೌಲ್ಯಗಳು ಮತ್ತು ಸೇವಾಭಾವನೆಯ ಮೂಲಕ ಅವರು ವಿಶ್ವದ ಗಮನ ಸೆಳೆದಿದ್ದಾರೆ ಎಂದು ಹೇಳಿದರು.
ಹುಲಕೋಟಿಯ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀಸ್ವಾಮಿ ಶಿವಪ್ರಿಯಾನಂದಜಿ ಮಹಾರಾಜರು ಮಾತನಾಡಿ, ಸ್ವಾಮಿ ವಿವೇಕಾನಂದರು ಪರಮ ತಪಸ್ವಿಗಳು, ಶಕ್ತಿಯ ಸಂಕೇತ. ದೇಶವು ಸೋಮಾರಿತನ, ಸಣ್ಣತನ, ದ್ವಿಮುಖ ಅಥವಾ ಕಪಟ ರೀತಿಯಿಂದ ವರ್ತಿಸುವವರಿಂದ ತುಂಬಿತುಳುಕುತ್ತಿದೆ. ಈ ನ್ಯೂನತೆಗಳಿಂದ ಹೊರಬಂದು ಪ್ರತಿಯೊಬ್ಬರಲ್ಲಿ ಆತ್ಮ ಶಕ್ತಿಯು ಜಾಗೃತಗೊಳ್ಳುವಂತೆ ಮಾಡಬೇಕು. ಒಂದು ವ್ಯಕ್ತಿ ಅಥವಾ ಒಂದು ದೇಶವು ಶ್ರೇಷ್ಠವಾಗಬೇಕಾದರೆ ಅಸೂಯೆ ಹಾಗೂ ದ್ವೇಷಭಾವನೆ ಇಲ್ಲದಿರುವುದು, ಸತ್ಕಾರ್ಯಗಳನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ ಎಂಬ ದೃಢ ವಿಶ್ವಾಸ ನಮ್ಮಲ್ಲಿರಬೇಕು. ನಾವು ಒಳ್ಳೆಯವರಾಗಬೇಕು ಹಾಗೂ ಬೇರೆಯವರು ಒಳ್ಳೆಯವರಾಗಲು ಸಹಾಯ ಮಾಡಬೇಕು ಎಂಬ ವಿವೇಕಾನಂದರ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ನಮ್ಮ ಸುಧಾರಣೆಯೊಂದಿಗೆ ದೇಶದ ಪ್ರಗತಿ ಸಾಧ್ಯವೆಂದು ವಿವರಿಸಿದರು.
ಹೊಸಪೇಟೆಯ ರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಶ್ರೀಸ್ವಾಮಿ ಸುಮೇದಾನಂದಜಿ ಮಹಾರಾಜರು ಜಿ.ಎಸ್. ಶಿವರುದ್ರಪ್ಪನವರು ಸ್ವಾಮಿ ವಿವೇಕಾನಂದರ ಕುರಿತು ರಚಿಸಿದ ಗೀತೆಯನ್ನು ಹಾಗೂ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಎಂ. ತುಂಬರಮಟ್ಟಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
ವೆಂಕಟೇಶ್ ಅಲ್ಕೋಡ್ ನಾಡಗೀತೆ ಪ್ರಸ್ತುತಪಡಿಸಿದರು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಸರ್ವರನ್ನು ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತೀಯರಲ್ಲಿ ಸ್ವದೇಶಿತನವನ್ನು ಜಾಗೃತಗೊಳಿಸಿದರು. ನಮ್ಮ ಸಂಸ್ಕೃತಿಯ ಬಗ್ಗೆ ನಾವು ಹೆಮ್ಮೆ ಪಡೆಯಬೇಕೆಂದು ತಿಳಿಸಿದರು. ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಮಾಡಬೇಕು. ನಾವು ಒಳ್ಳೆಯವರಾಗಿ ಬೇರೆಯವರಿಗೂ ಒಳ್ಳೆಯ ಮಾರ್ಗವನ್ನು ತೋರಿಸಬೇಕು. ದೇಶ ಸುಧಾರಣೆಯಾಗಬೇಕಾದರೆ ಮೊದಲು ನಮ್ಮಲ್ಲಿಯ ಚಿಂತನೆಗಳು, ನಡೆ-ನುಡಿಗಳು ಸುಧಾರಣೆಯಾಗಬೇಕು ಎಂಬ ಮಾತು ಅನುಕರಣೀಯವಾಗಿದೆ ಎಂದರು.



