ಶರಣ ಜೀವನ ರೂಪಿಸಿಕೊಳ್ಳಿ : ರತ್ನಕ್ಕ ಪಾಟೀಲ

0
Vocabulary memorization competition
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಶಿವಶರಣರು ನುಡಿದಂತೆ ನಡೆದು ಆದರ್ಶ ಬದುಕನ್ನು ಸಾಗಿಸಿದವರು. ಅವರ ಆತ್ಮಾನುಭವ ವಾಣಿಗಳೇ ವಚನಗಳು, ಶರಣರು ತಮ್ಮ ಬದುಕಿನಲ್ಲಿ ಕಂಡುಕೊಂಡ ಸಾಮಾಜಿಕ, ನೈತಿಕ, ಆಧ್ಯಾತ್ಮಿಕ, ಜಾತ್ಯಾತೀತ ಮೌಲ್ಯಗಳ ಆಚರಣೆಗಳನ್ನು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಪರಿಚಯಿಸಿದವರು. ಶರಣರು ತಿಳಿಸಿರುವ ವಚನಗಳನ್ನು ಇಂದು ನಾವು ಮಕ್ಕಳಿಗೆ ತಿಳಿಸಿ ಹೇಳಿದರೆ ಅವರೂ ಮಾನವೀಯ ಮೌಲ್ಯಗಳ ಉತ್ತಮ ಗುಣಾಂಶಗಳನ್ನು ರೂಢಿಸಿಕೊಂಡು ಸುಸಂಸ್ಕೃತರಾಗಿ ಬೆಳೆಯುತ್ತಾರೆ.

Advertisement

ಮುಂದೊಂದು ದಿನ ಸುಂದರ ಸಮಾಜ ನಿರ್ಮಾಣಕ್ಕೆ ಸಹಾಯಕರಾಗುತ್ತಾರೆ. ಹೀಗಾಗಿ ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ವಚನಗಳು ಸಹಕಾರಿಯಾಗಿವೆ ಎಂದು ಗದಗ ತಾಲೂಕ ಕದಳಿ ಮಹಿಳಾ ವೇದಿಕೆಯ ಗೌರವಾಧ್ಯಕ್ಷರಾದ ಶರಣೆ ರತ್ನಕ್ಕ ಪಾಟೀಲ ತಿಳಿಸಿದರು.

ಗದಗ ಜಿಲ್ಲಾ ಮತ್ತು ತಾಲೂಕಾ ಕದಳಿ ಮಹಿಳಾ ವೇದಿಕೆ ಶ್ರಾವಣ ಮಾಸದ ಪ್ರಯುಕ್ತ ಸಿದ್ಧಲಿಂಗ ನಗರದಲ್ಲಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಚನ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಕ್ಕಳು ಮೊಬೈಲ್‌ನಲ್ಲಿ ಗೇಮ್, ಡ್ಯಾನ್ಸ್ ಇನ್ನಿತರೆ ವಿಷಯಗಳನ್ನು ನೋಡುವ ಬದಲಾಗಿ ಶರಣರ ವಚನಗಳನ್ನು ಓದಿ, ಕೇಳಿ, ಹಾಡಿ ಮನನ ಮಾಡಿಕೊಂಡು ಶರಣ ಜೀವನ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಸುಲೋಚನಾ ಐಹೊಳ್ಳಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮತ್ತು ಭೋಜನ ಮಾಡುವ ಮುನ್ನ ವಚನ ಹೇಳುವುದನ್ನು ರೂಢಿಸಿಕೊಳ್ಳಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಶಿಕ್ಷಕಿಯರಾದ ಎಸ್.ಆರ್. ಹನುಮಗೌಡ್ರ ಮಾತನಾಡಿ, ವಚನ ವಾಚನ ಮಾಡುವುದಕ್ಕಿಂತ ಸಂಗೀತಮಯವಾಗಿ ಹಾಡಿದರೆ ಹೆಚ್ಚಿನ ಪರಿಣಾಮ ದೊರೆಯುವುದು. ಕಾರಣ ವಿದ್ಯಾರ್ಥಿಗಳು ಸಂಗೀತ ಸಂಯೋಜನೆಯೊಂದಿಗೆ ವಚನ ಹಾಡುವದನ್ನು ಕಲಿತುಕೊಳ್ಳಬೇಕೆಂದು ಸೂಚಿಸಿದರು.

ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ ಬಸವತತ್ವಾಭಿಮಾನಿಗಳಾದ ಎಸ್.ಎ. ಮುಗದ ಮತ್ತು ಗೌರಕ್ಕ ಬಡಿಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ವಚನ ತತ್ವಾಚರಣೆಗಳ ಮಾರ್ಗದಲ್ಲಿ ನಡೆಯಬೇಕೆಂದು ಹೇಳಿದರು.

ಪ್ರಾರಂಭದಲ್ಲಿ ಆರತಿ ನಾಯ್ಕರ, ಅನುಪಮಾ ಮುಗಳಿ ಪ್ರಾರ್ಥನೆ ಹೇಳಿದರು. ಕದಳಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ರೇಣುಕಾ ಕರೆಗೌಡ್ರ ಸ್ವಾಗತಿಸಿದರು. ಮಂಜುಳಾ ಅಕ್ಕಿ ಕಾರ್ಯಕ್ರಮ ನಿರೂಪಿಸಿದರು. ಮಂಗಳಾ ಕಾಮಣ್ಣವರ ವಂದಿಸಿದರು. ಮಂಜುಳಾ ಅಕ್ಕಿ ಕಾರ್ಯಕ್ರಮ ನಿರೂಪಿಸಿದರು.

ವಚನ ಕಂಠಪಾಠ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಚನ ಹೇಳಿದ ವೀರಯ್ಯ ಹಿರೇಮಠ – ಪ್ರಥಮ, ಶಾಖಾಂಬರಿ ನರೇಗಲ್ಲ – ದ್ವಿತೀಯ, ಶ್ರೀದೇವಿ ಹಿರೇಮಠ – ತೃತೀಯ, ದಿವ್ಯಶ್ರೀ ಪಾಟೀಲ ಮತ್ತು ಭೂಮಿಕಾ ಬೇಂದ್ರೆ ಸಮಾಧಾನಕರ ಸ್ಥಾನ ಪಡೆದರು. ಭಾಗವಹಿಸಿದ ಸ್ಪರ್ಧಿಗಳೆಲ್ಲರಿಗೂ ವಚನ ಪುಸ್ತಕಗಳನ್ನು ಮತ್ತು ವಿಜೇತರಾದವರಿಗೆ ಸೂಕ್ತ ಬಹುಮಾನಗಳನ್ನು ವೇದಿಕೆಯಲ್ಲಿನ ಗಣ್ಯರು ವಿತರಿಸಿದರು.


Spread the love

LEAVE A REPLY

Please enter your comment!
Please enter your name here