ಬೆಂಗಳೂರು:- ಒಕ್ಕಲಿಗರನ್ನು ಎದುರು ಹಾಕಿಕೊಂಡು ಯಾವುದೇ ಸರ್ಕಾರ ನಡೆದಿಲ್ಲ, ನಡೆದಿದ್ದರೆ ಅದು ಉಳಿಯಲ್ಲ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಹೇಳಿದ್ದಾರೆ. ನಗರದಲ್ಲಿ ಒಕ್ಕಲಿಗ ಸಂಘದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗರನ್ನು ಎದುರು ಹಾಕಿಕೊಂಡರೆ ಎಷ್ಟು ಸರ್ಕಾರ ಬಿದ್ದಿದೆ ಎಂಬ ಇತಿಹಾಸವಿದೆ. ಇಲ್ಲಿದಿದ್ದರೆ ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡಲಿದ್ದೇವೆ ಎಂದರು.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವೂ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ಹತ್ತು ವರ್ಷ ಆಗಿದೆ. ಜಾತಿಗಣತಿಗೆ ವರದಿ ಹಾಗೂ ಕ್ಯಾಬಿನೆಟ್‌ನಲ್ಲಿ ಸಲ್ಲಿಕೆ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊನ್ನೆ ಹೇಳಿಕೆ ಕೊಟ್ಟಿದ್ದಾರೆ. ಇವರು ಮನೆ ಮನೆ ಸಮೀಕ್ಷೆ ಸರಿಯಾಗಿ ಮಾಡಿಲ್ಲ. ಜಾತಿಗಣತಿ ಸಮೀಕ್ಷೆ ಲೋಪದೋಷದಿಂದ ಕೂಡಿದೆ. 5 ಕೋಟಿ 98 ಲಕ್ಷ ಜನ ಇದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. ಆದರೆ ಈಗ 7 ಕೋಟಿ ಜನಸಂಖ್ಯೆ ಇದೆ ಎಂದು ಮಾಧ್ಯಮದಲ್ಲಿ ಬರುತ್ತಿದೆ. 114 ಉಪಪಂಗಡಗಳು ನಮ್ಮಲ್ಲಿದೆ. ಆದರೆ ಇವುಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಆಗಬೇಕು. ಆದರೆ ಈ ಸಮೀಕ್ಷೆ ನಡೆದು ಈಗ ಹತ್ತು ವರ್ಷ ಆಗಿದೆ. ಇದು ಕಾನೂನುಬಾಹಿರ. ಸಭೆಯಲ್ಲಿ ನಿರ್ಮಲಾನಂದ ಸ್ವಾಮೀಜಿ ಕೂಡ ಭಾಗಿಯಾಗಲಿದ್ದಾರೆ. ನಮ್ಮ ನಾಯಕರು ಚಕಾರವೆತ್ತುತ್ತಿಲ್ಲ ಹೀಗಾಗಿ ಒಕ್ಕಲಿಗ ನಾಯಕರು ಪ್ರಶ್ನೆ ಮಾಡಬೇಕು ಎಂಬ ಕಾರಣಕ್ಕೆ ಸಭೆ ಕರೆದಿದ್ದೇವೆ. ವೀರಶೈವ ಮುಖಂಡರು, ಸ್ವಾಮೀಜಿ ಜೊತೆ ಕೂಡ ಮಾತಾನಾಡಿ, ಶೀಘ್ರದಲ್ಲಿಯೇ ಜಂಟಿ ಸಭೆಯನ್ನು ಕರೆಯಲಿದ್ದೇವೆ ಎಂದರು.



