ವಿಜಯಸಾಕ್ಷಿ ಸುದ್ದಿ, ರೋಣ : ಮತದಾನ ಸಂವಿಧಾನಬದ್ಧ ಹಕ್ಕಾಗಿದ್ದು, 18 ವರ್ಷದ ಮೇಲ್ಪಟ್ಟವರೆಲ್ಲರೂ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಬೇಕು ಎಂದು ತಾ.ಪಂ ಇಒ ಎಸ್.ಕೆ. ಇನಾಮದಾರ ಹೇಳಿದರು.
ಅವರು ಶುಕ್ರವಾರ ಕುರಹಟ್ಟಿ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಭಾಗಿಯಾದ ಕೂಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.
ಮತದಾನದ ದಿನದಂದು ಮತದಾರರು ನಿಷ್ಕಾಳಜಿ ತೋರಬಾರದು. ಕಾರಣ, ಮತದಾನ ಎನ್ನುವುದು ಪವಿತ್ರ ಕರ್ತವ್ಯವಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ದೃಷ್ಟಿಯಿಂದ ಮತ ಚಲಾಯಿಸಬೇಕು. ಸಂವಿಧಾನ ನಮಗೆ ಮತದಾನದ ಮೂಲಕ ಶಕ್ತಿಯನ್ನು ನೀಡಿದ್ದು, ಸದ್ಬಳಕೆಯಾಗಬೇಕು ಎಂದರು.
ಪ್ರಜಾಪ್ರಭುತ್ವದಲ್ಲಿ ಮತದಾರನೇ ನಿಜವಾದ ಪ್ರಭು. ಪ್ರಜಾಪ್ರಭುತ್ವ ಉಳಿಯಬೇಕಾದರೆ ದೇಶದ ಪ್ರಜೆಗಳಾದ ನಾವು ಕಡ್ಡಾಯ ಮತದಾನ ಮಾಡಬೇಕು. ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕುರಹಟ್ಟಿ ಗ್ರಾಮದ ಎಲ್ಲ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಪಿಡಿಒ ಐ.ಎಫ್. ಬೋದ್ಲೇಖಾನ್, ಶಾಂತಾ ತಿಮ್ಮರೆಡ್ಡಿ, ಶಿವಾನಂದ ಪೂಜಾರ ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.