ಬಾಗಲಕೋಟೆ: ಉಪಚುನಾವಣೆಯ ಪ್ರಚಾರಕ್ಕೆ ವೇಗ ನೀಡಿರುವ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಮತಯಾಚನೆ ನಡೆಸಿದರು.
ನಾಯನಗಲಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಕಳ್ಳೆತ್ತುಗೆ ವೋಟು ಹಾಕಬೇಡಿ, ಉಳುವ ಎತ್ತಿಗೆ ಮತ ಹಾಕಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ” ಎಂದು ಜನರಿಗೆ ಮನವಿ ಮಾಡಿದರು. ಬಿಜೆಪಿಯವರು ಕಳ್ಳೆತ್ತುಗಳು, ಅವರಿಗೆ ಮತ ಹಾಕಬಾರದು. ನಾನು ಸಿಎಂ ಆಗಿ ಇಲ್ಲಿಗೆ ಬಂದಿಲ್ಲ, ಪಕ್ಷದ ಕಾರ್ಯಕರ್ತನಾಗಿ ಬಂದಿದ್ದೇನೆ. ಮೇಟಿ ಅವರ ಅಪೂರ್ಣ ಕೆಲಸಗಳನ್ನು ಮುಂದುವರಿಸಲು ಉಮೇಶ್ ಮೇಟಿಗೆ ಮತ ನೀಡಿ ಗೆಲ್ಲಿಸಬೇಕು” ಎಂದು ಕರೆ ನೀಡಿದರು.
ಇದೇ ವೇಳೆ ಹಿಂದಿನ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, B. S. ಯಡಿಯೂರಪ್ಪ, ಬೊಮ್ಮಾಯಿ ಆಡಳಿತದಲ್ಲಿ ಅಭಿವೃದ್ಧಿಗಿಂತ ಲೂಟಿಯೇ ನಡೆದಿದ್ದು, ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಆರೋಪಿಸಿದರು.
ಆಲಮಟ್ಟಿ ಜಲಾಶಯದ ಎತ್ತರವನ್ನು 519ರಿಂದ 524 ಮೀಟರ್‌ವರೆಗೆ ಹೆಚ್ಚಿಸುವ ಅಗತ್ಯವಿದ್ದು, ಬಿಜೆಪಿ ಅಧಿಕಾರದಲ್ಲಿದ್ದಾಗ ಈ ಕಾರ್ಯ ಕೈಗೊಂಡಿಲ್ಲ ಎಂದು ಟೀಕಿಸಿದರು. ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತ ಕನಸನ್ನೂ ಅವರು ಪ್ರಸ್ತಾಪಿಸಿ, ಈ ವಿಷಯದಲ್ಲಿ ಹಿಂದಿನ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯವರು ಈಗ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹವರಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದರು.



