ಬೆಂಗಳೂರು: 2023ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಆಳಂದ ಕ್ಷೇತ್ರದಲ್ಲಿ ಅಕ್ರಮ ಆಗಿದೆ ಎಂದು ಆರೋಪಿಸಿ ದಾಖಲೆಗಳನ್ನು ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ. ಇನ್ನೂ ಈ ಆರೋಪದ ಬಗ್ಗೆ ಡಿಕೆಶಿ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಾನು ರಾಹುಲ್ ಗಾಂಧಿ ಅವರ ಜೊತೆ ದೃಢವಾಗಿ ನಿಲ್ಲುತ್ತೇನೆ. ಭಾರತದ ಜನ ಪಾರದರ್ಶಕತೆ, ನ್ಯಾಯಸಮ್ಮತತೆಗೆ ಅರ್ಹರು. ಆದರೆ ಮತದಾರರನ್ನು ಗುರಿಯಾಗಿಸಿಕೊಂಡು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಗುಪ್ತ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದಿದ್ದಾರೆ.
ಕಾಂಗ್ರೆಸ್‌ನ ಬಲಿಷ್ಠ ಬೂತ್‌ಗಳಲ್ಲಿ ಕಾನೂನುಬದ್ಧ ಮತಗಳನ್ನು ಅಳಿಸಲು ಸಾಫ್ಟ್‌ವೇರ್, ಹೊರಗಿನವರ ಹಸ್ತಕ್ಷೇಪ ಬಳಕೆ ಆಳಂದ ಕ್ಷೇತ್ರದ ಸಾಕ್ಷಿಗಳಿಂದ ಗೊತ್ತಾಗುತ್ತದೆ. ಇದು ಆಘಾತಕಾರಿ. ಜನರ ಧ್ವನಿಯನ್ನು ಅಡಗಿಸಲು ಉದ್ದೇಶಪೂರ್ವಕ ಮತ್ತು ಯೋಜಿತ ಪ್ರಯತ್ನವಾಗಿದೆ. ನಾವು ನಮ್ಮ ಧ್ವನಿ ಎತ್ತುವುದನ್ನ, ದಾಖಲೆಗಳನ್ನ ಬಹಿರಂಗಪಡಿಸುವುದನ್ನ ಮುಂದುವರಿಸುತ್ತೇವೆ, ವೋಟ್ ಚೋರಿ ಫ್ಯಾಕ್ಟರಿ ಎಂದು ಬರೆದುಕೊಂಡಿದ್ದಾರೆ.



