ಬೆಂಗಳೂರು: ಕುಡಿದು ಶಾಲಾ ಬಸ್‌ಗಳನ್ನು ಓಡಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವಂತೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಪೊಲೀಸ್ ಇಲಾಖೆಯಿಂದ ಶಿಫಾರಸು ಮಾಡಲ್ಪಟ್ಟ ಡಿಎಲ್‌ಗಳನ್ನು ಸಂಬಂಧಿಸಿದ ಆರ್‌ಟಿಒ ಅಧಿಕಾರಿಗಳು ಅಮಾನತು ಮಾಡಲಿದ್ದಾರೆ. ಶಾಲಾ ಮತ್ತು ಕಾಲೇಜು ವಾಹನಗಳಿಗೆ ಅರ್ಹತಾ ಪತ್ರ ನವೀಕರಣ ಕಡ್ಡಾಯವಾಗಿದ್ದು, ನವೆಂಬರ್ 30ರೊಳಗೆ ಎಫ್‌ಸಿ ಮಾಡಿಸಿಕೊಳ್ಳಬೇಕೆಂದು ಡೆಡ್‌ಲೈನ್ ನೀಡಲಾಗಿದೆ. ಹೊರರಾಜ್ಯದ ಬಸ್‌ಗಳಲ್ಲಿ ಅನಧಿಕೃತ ಸರಕು ಸಾಗಾಣಿಕೆ ಪತ್ತೆಯಾದರೆ ವಾಹನಗಳನ್ನು ಸೀಜ್ ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ.
ರಾಜ್ಯದಲ್ಲಿ ಹೊರರಾಜ್ಯ ನೋಂದಣಿ ವಾಹನಗಳ ತೆರಿಗೆ ವಸೂಲಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರ್‌ಟಿಒ ಕಚೇರಿಗಳಲ್ಲಿ ಬ್ರೋಕರ್‌ಗಳ ಪ್ರವೇಶ ಸಂಪೂರ್ಣ ನಿಷೇಧವಾಗಿದ್ದು, ಏಜೆಂಟ್ ಮುಖಾಂತರ ಡಿಎಲ್ ಅಥವಾ ದಾಖಲೆ ಸಲ್ಲಿಸಿದರೆ ಅಧಿಕಾರಿಗಳ ಮೇಲೆಯೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಸಿದ್ದಾರೆ.
ಇದೇ ವೇಳೆ, ಕರ್ನೂಲ್ ಬಸ್ ದುರಂತದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಬಸ್‌ಗಳ ಹಿಂಭಾಗದಲ್ಲಿ ಎಮರ್ಜೆನ್ಸಿ ಡೋರ್ ಕಡ್ಡಾಯವಾಗಿರಬೇಕು ಎಂದು ಇಲಾಖೆ ನಿರ್ದೇಶನ ಹೊರಡಿಸಿದೆ. ಪ್ರಯಾಣಿಕರು ಹತ್ತಿ ಇಳಿಯುವ ಸೌಲಭ್ಯವಿಲ್ಲದಿದ್ದರೆ ಆ ಬಸ್‌ಗಳ ಎಫ್‌ಸಿ ರದ್ದು ಮಾಡಲಾಗುವುದು ಎಂದು ತಿಳಿಸಲಾಗಿದೆ.


