ವಿಜಯಸಾಕ್ಷಿ ಸುದ್ದಿ, ಗದಗ : ಮತದಾನ ಪವಿತ್ರವಾದ ಕಾರ್ಯವಲ್ಲದೇ ಜನರಿಗೆ ಧ್ವನಿಯನ್ನು ನೀಡುತ್ತದೆ. ನರೇಗಾ ಕೂಲಿಕಾರರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಬಿ. ದೇವರಮನಿ ಹೇಳಿದರು.
ಗಜೇಂದ್ರಗಡ ತಾಲೂಕಿನ ಕುಂಟೋಜಿ ಗ್ರಾ.ಪಂ ವ್ಯಾಪ್ತಿಯ ಬೆಣಚಮಟ್ಟಿ ಗ್ರಾಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಗದಗ, ತಾಲೂಕಾ ಸ್ವೀಪ್ ಸಮಿತಿ ಗಜೇಂದ್ರಗಡ ಹಾಗೂ ಗ್ರಾ.ಪಂ ಕುಂಟೋಜಿ ಸಹಯೋಗದಲ್ಲಿ ನಡೆದ ಎರಡನೇ ದಿನದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮತದಾನ ಕುರಿತು ವಿಶಿಷ್ಟ ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ `ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನದಲ್ಲಿ ಅವರು ಮಾತನಾಡಿದರು.
ಮೇ ತಿಂಗಳಲ್ಲಿ ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶ ನಿರ್ಮಿಸೋಣ. ಮತದಾನ ದಿನದಂದು ನಾವು ಸಮಯ ವ್ಯರ್ಥ ಮಾಡದೆ ಚುನಾವಣಾ ಆಯೋಗ ನಿಗದಿಪಡಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತ ಚಲಾಯಿಸಬೇಕು ಎಂದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಡಿ.ಮೋಹನ್ ಮಾತನಾಡಿ, ಮೇ 7ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಬೆಣಚಮಟ್ಟಿ ಗ್ರಾಮದ ಕೂಲಿಕಾರರು ತಪ್ಪದೇ ನಿಮ್ಮ ಮತಗಟ್ಟೆಯಲ್ಲಿ ಮತದಾನ ಮಾಡಬೇಕು. ಇಲ್ಲಿ ತಾಂಡಾ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ನೂರಕ್ಕೆ ನೂರರಷ್ಟು ಮತದಾನ ಮಾಡಬೇಕು ಎಂದರು.
ಕಾಮಗಾರಿ ಸ್ಥಳದಲ್ಲಿ 482 ಜನ ಕೂಲಿಕಾರರು ಇದ್ದು, ಅದರಲ್ಲಿ ತಾಂಡಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಅವರು ಗುಳೇ ಹೋಗದಂತೆ ಸ್ಥಳೀಯವಾಗಿ ಕೆಲಸ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ (ಗ್ರಾ.ಉ) ಬಸವರಾಜ ಬಡಿಗೇರ್, ಪಿಡಿಒ ಮಹಾಂತೇಶ ತಳವಾರ, ಜಿ.ಪಂ ಎಡಿಪಿಸಿ ಕಿರಣಕುಮಾರ ಎಸ್.ಎಚ್, ತಾಂತ್ರಿಕ ಸಂಯೋಜಕರಾದ ಪ್ರಿಯಾಂಕಾ ಅಂಗಡಿ, ತಾಲೂಕ ಸಂಯೋಜಕರಾದ ವಸಂತ ಅನ್ವರಿ, ಐಇಸಿ ಸಂಯೋಜಕ ಮಂಜುನಾಥ ಹಳ್ಳದ, ತಾಂತ್ರಿಕ ಸಹಾಯಕರಾದ ಅಜಯ್ ಹೂಗಾರ, ಬಿಎಫ್‌ಟಿ ಶಂಕರ ಪಾಟೀಲ, ಜಿಕೆಎಂ ಅನ್ನಪೂರ್ಣಮ್ಮ ಹಿರೇಮಠ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನ ಕುರಿತು, ಉದ್ಯೋಗ ಖಾತ್ರಿ ಅಭಿಯಾನದ ಕುರಿತು `ನಮ್ಮ ಹೆಮ್ಮೆಯ ನರೇಗಾ, ನಾವು ಗುಳೇ ಹೋಗುವುದಿಲ್ಲ, ಮತದಾನ ನಮ್ಮ ಹಕ್ಕು’ ಎಂದು ಕೂಲಿಕಾರರು ಪ್ಲೇ ಕಾರ್ಡ್ ಹಿಡಿದು ವಿಭಿನ್ನವಾಗಿ ಜಾಗೃತಿ ಮೂಡಿಸಿದರು. ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಮತ್ತು ಮೇ 7 ಎಂದು ಅಕ್ಷರ ಬರೆದು ಅದರ ಮೇಲೆ ಕೂಲಿಕಾರರನ್ನು ಕೂರಿಸಿ, ವಿಶೇಷವಾಗಿ ಜಾಗೃತಿ ಮೂಡಿಸುವ ಮೂಲಕ ಕೂಲಿಕಾರರಲ್ಲಿ ಉತ್ಸಾಹ ಮೂಡಿಸಲಾಯಿತು.