ವಿಜಯಸಾಕ್ಷಿ ಸುದ್ದಿ, ನರಗುಂದ : ನರೇಗಾ ಯೋಜನೆಯಲ್ಲಿ ಕೆಲಸ ಮಾಡಿರುವ ಕೂಲಿ ಕಾರ್ಮಿಕರಿಗೆ ಸರಿಯಾಗಿ ಕೂಲಿ ಮೊತ್ತ ಪಾವತಿಸದೇ ಸತಾಯಿಸುತ್ತಿರುವ ಚಿಕ್ಕನರಗುಂದ ಗ್ರಾ.ಪಂ ಪಿಡಿಓ ವಿರುದ್ಧ ಕೂಲಿ ಕಾರ್ಮಿಕರು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕನರಗುಂದ ಗ್ರಾ.ಪಂನಲ್ಲಿ ನರೇಗಾ ಯೋಜನೆಯಲ್ಲಿ ಬದು ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡಿರುವ ಕೂಲಿ ಕಾರ್ಮಿಕರು ಪಿಡಿಒ ಎಚ್.ಕೆ. ಅರಳಿಕಟ್ಟಿ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ಅಸಮಾಧಾನ ಹೊರಹಾಕಿದರು.
ನಾಲ್ಕೈದು ತಿಂಗಳಿಂದ ಪ್ರತಿದಿನ ಕೂಲಿ ಪಾವತಿ ನಿರೀಕ್ಷಿಸಿ ಬರುತ್ತಿದ್ದರೂ, ಪಿಡಿಒ ಅವರು ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷ ಪಾಟೀಲ ಅವರಿಗೆ ತಮ್ಮ ಅಳಲು ತೋಡಿಕೊಂಡರು.
ಕೂಲಿ ಕೆಲಸ ಮಾಡಿಯಾದರೂ ಬದುಕು ಸಾಗಿಸಬೇಕೆಂಬ ಕೂಲಿ ಕಾರ್ಮಿಕರ ಆಸೆಗೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ತಣ್ಣೀರು ಎರಚಿದ್ದಾರೆ. ಕೆಲಸ ಮಾಡಿದ ಕೂಲಿ ಮೊತ್ತ ನಾಲ್ಕು ದಿನದಲ್ಲಿ ಪಾವತಿ ಮಾಡಬೇಕು. ಪಿಡಿಒ ಅರಳಿಕಟ್ಟಿ ಮೇಲೆ ಕ್ರಮ ಜರುಗಿಸಿ ಅಮಾನತು ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಶಿವಪ್ಪ ಸಾತಣ್ಣವರ, ಶಿವಾನಂದ ಬುಳ್ಳನ್ನವರ, ಮೈಲಾರಿ ಚನ್ನಪ್ಪಗೌಡ್ರ, ಶ್ರೀಕಾಂತ್ ಕೋಣನ್ನವರ, ಮಂಜುನಾಥ ಹೊಸಗಾಣಿಗೇರ, ಕಲ್ಲಪ್ಪ ಹಾದಿಮನಿ, ಅಪ್ಪಣ್ಣ ಕುರಿ, ಸಂಗಮೇಶ ತೊರಗಲ್, ಮಲ್ಲಪ್ಪ ಚಲವಾದಿ, ದೇವಪ್ಪ ಚಲವಾದಿ ಮುಂತಾದವರಿದ್ದರು.