ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಸ್ತೆಗುಂಡಿ ಇರುವಲ್ಲಿಗೆ ಭೇಟಿ ಕೊಟ್ಟರೆ ಜನರು ಛೀಮಾರಿ ಹಾಕುವ ಭಯದಿಂದ ಪಾರ್ಕ್ ಗಳಲ್ಲಿ ನಡಿಗೆ ಆರಂಭಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ರಸ್ತೆಗಳನ್ನೇ ಮರೆತುಬಿಟ್ಟಿದೆ ಎಂದು ಆಕ್ಷೇಪಿಸಿದರು. ಬೆಂಗಳೂರಿನ ರಸ್ತೆಗಳು ಮೃತ್ಯು ಕೂಪಗಳಾಗಿವೆ. ಇಡೀ ಬೆಂಗಳೂರಿನಲ್ಲಿ 10-12 ಜನರು ಸತ್ತಿದ್ದಾರೆ ಎಂದರು. ರಸ್ತೆ ಗುಂಡಿ ಮರೆಮಾಚಲು ಪಾರ್ಕ್‍ಗಳ ಮೊರೆ ಹೋಗಿದ್ದಾರೆ ಎಂದು ದೂರಿದರು. ಗುಂಡಿ ತಪ್ಪಿಸಲು ಹೋಗಿ ಅಪಘಾತದಿಂದ ಸತ್ತದ್ದು ಜಗಜ್ಜಾಹೀರಾಗಿದೆ ಎಂದರು.
ಕೂಲಿಂಗ್ ಗ್ಲಾಸಿನಲ್ಲಿ ಹಳ್ಳ ಕಾಣುವುದಿಲ್ಲ. ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಎಲ್ಲ ಜನತೆಗೆ ತಾವು ಹಾಕಿದ ಮಾದರಿಯ ಕೂಲಿಂಗ್ ಗ್ಲಾಸ್ ಕೊಡಿಸಲಿ ಎಂದು ವ್ಯಂಗ್ಯವಾಡಿದರು. ಇದು ಬೇಜವಾಬ್ದಾರಿತನದ ಪರಮಾವಧಿ ಎಂದು ಟೀಕಿಸಿದರು.



