ಬೆಂಗಳೂರು: ಕೇವಲ ಒಂದು ಧರ್ಮ ಓಲೈಕೆಗಾಗಿ ವಕ್ಫ್ ಬಳಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಚಿವ ಜಮೀರ್ ಖಾನ್ ಗೆ ಕಾನೂನು ಪ್ರಕಾರ ವಕ್ಫ್ ಅದಾಲತ್ ಮಾಡಲು ಅವಕಾಶ ಇಲ್ಲ. ಒತ್ತಡದ ಮೂಲಕ ಆಸ್ತಿಗೆ ನೋಟಿಸ್ ಕೊಡಲಾಗುತ್ತಿದೆ. ವಕ್ಫ್ ಟ್ರಿಬ್ಯೂನಲ್ ನಲ್ಲಿ ಯಾರಿಗೂ ನ್ಯಾಯ ಸಿಗುವುದಿಲ್ಲ. ಕೇವಲ ಒಂದು ಧರ್ಮ ಓಲೈಕೆಗಾಗಿ ವಕ್ಫ್ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.
ರಾಜರಾಜ ಚೋಳನ ದೇವಸ್ಥಾನ ವಕ್ಫ್ ಆಸ್ತಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಊರಿಗೆ ಊರೇ ವಕ್ಫ್ ಆಗಿದೆ. ಹೊಯ್ಸಳ, ಚಾಲುಕ್ಯರು ಕಟ್ಟಿದ ದೇವಸ್ಥಾನ ವಕ್ಫ್ ಆಗಿದೆ. ಈ ಹಿನ್ನೆಲೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಯಾಗಬೇಕು ಎಂದು ಹೇಳಿದರು. ಕಾಂಗ್ರೆಸ್ ಸಂಸದರ ಮನೆ ಮುಂದೆ ಹೋಗಿ ವಕ್ಫ್ ಬಿಲ್ ಪಾರ್ಲಿಮೆಂಟ್ ನಲ್ಲಿ ಬಂದಾಗ ಬೆಂಬಲ ಕೊಡಲು ಸೂಚಿಸಬೇಕು. ವಕ್ಫ್ ಗೆಜೆಟ್ ನೋಟಿಫಿಕೇಷನ್ ರದ್ದಾಗಬೇಕು ಎಂದು ಒತ್ತಾಯಿಸಿದರು.