ನಟ ಕಿಚ್ಚ ಸುದೀಪ್ ನೀಡಿದ್ದ “ಒಂದು ಪಡೆ ಯುದ್ಧಕ್ಕೆ ಸಜ್ಜಾಗಿದೆ” ಎಂಬ ಹೇಳಿಕೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ಬೆನ್ನಲ್ಲೇ, ಇದೀಗ ಸುದೀಪ್ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಹೇಳಿಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪ್ರತಿಕ್ರಿಯೆಗೆ ಕಾರಣವಾಗಿದ್ದು, ಇಬ್ಬರ ಮಧ್ಯೆ ನೇರ ಮಾತಿನ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು.
ಈ ಕುರಿತು ಮಾತನಾಡಿದ ಕಿಚ್ಚ ಸುದೀಪ್, “ನಾನು ಹೇಳಿದ ಮಾತು ವಿವಾದ ಆಗಬೇಕಿದ್ದರೆ ಅದೇ ದಿನ ಅಥವಾ ಮರುದಿನವೇ ಎಲ್ಲರೂ ಪ್ರಶ್ನಿಸಬೇಕಿತ್ತು. ನೀವು ಯಾರಿಗೆ ಹೇಳಿದ್ರಿ ಎಂದು ನೇರವಾಗಿ ಕೇಳಬೇಕಿತ್ತು. ಆದರೆ ಹಾಗಾಗಲಿಲ್ಲ. ಹಾಗಾಗಿ ಇದು ಅನಾವಶ್ಯಕವಾಗಿ ದೊಡ್ಡದಾಗುತ್ತಿದೆ” ಎಂದು ಹೇಳಿದ್ದಾರೆ.
ಮಾರ್ಕ್ ಹಾಗೂ ೪೫ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ, ತಮ್ಮ ಹೇಳಿಕೆ ಶಿವರಾಜ್‌ಕುಮಾರ್ ಸಿನಿಮಾವನ್ನು ಉದ್ದೇಶಿಸಿದ್ದೇ ಎಂಬ ಅನುಮಾನಕ್ಕೆ ಉತ್ತರಿಸಿದ ಸುದೀಪ್, “ನಾನು ಮಾತನಾಡಿದ್ದು ಪೈರಸಿ ಬಗ್ಗೆ. ೪೫ ಸಿನಿಮಾ ಬಗ್ಗೆ ಅಲ್ಲ. ಪೈರಸಿ ಚಿತ್ರರಂಗಕ್ಕೆ ದೊಡ್ಡ ಶತ್ರು. ಅದರ ವಿರುದ್ಧ ಮಾತನಾಡುವ ಹಕ್ಕು ನನಗಿದೆ” ಎಂದು ಸ್ಪಷ್ಟಪಡಿಸಿದರು.
“ಕಮಲ್ ಹಾಸನ್ ವಿಚಾರ ಬಂದಾಗ ನಾನು ಶಿವಣ್ಣ ಪರ ನಿಂತಿದ್ದೇನೆ. ಅವರು ನಮ್ಮ ಹೆಮ್ಮೆ. ನನ್ನ ಮಾತು ನಿಮ್ಮ ಬಗ್ಗೆನಾ ಎಂದು ಶಿವಣ್ಣನಿಗೆ ಕೇಳಿದ್ರೆ ಅವರು ನಗುತ್ತಾರೆ” ಎಂದು ಸುದೀಪ್ ಹೇಳಿದರು.
ವಿಜಯಲಕ್ಷ್ಮೀ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನನಗೆ ನೇರವಾಗಿ ಹೇಳಿದ್ರೆ ಉತ್ತರ ಕೊಡ್ತೀನಿ. ನನ್ನ ಸಿನಿಮಾ ಕಾಪಾಡಿಕೊಳ್ಳುವುದು ನನ್ನ ಹೊಣೆ. ಜಿದ್ದಾಜಿದ್ದಿ ಮಾಡ್ತಿಲ್ಲ. ಪೈರಸಿ ಮಾಡುವವರನ್ನು ಕರುಣೆ ಇಲ್ಲದೆ ಒಳಗೆ ಹಾಕಿಸುತ್ತೇವೆ” ಎಂದು ಕಠಿಣ ಎಚ್ಚರಿಕೆ ನೀಡಿದರು.
ಒಟ್ಟಿನಲ್ಲಿ, ಕಿಚ್ಚ ಸುದೀಪ್ ತಮ್ಮ ಹೇಳಿಕೆಗಳನ್ನು ವೈಯಕ್ತಿಕ ಸಂಘರ್ಷವಾಗಿ ತೆಗೆದುಕೊಳ್ಳಬಾರದು ಎಂದು ಸೂಚಿಸಿದ್ದು, ಈ ವಿವಾದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ.



