ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ನಡೆಸಿದೆ. ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಲಾಗಿದ್ದು, 80ಕ್ಕೂ ಹೆಚ್ಚು ಭಯೋತ್ಪಾದಕರು ಜೀವ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಬೆಂಗಳೂರಿನಿಂದ ಬೇರೆ ರಾಜ್ಯಗಳಿಗೆ ತೆರಳಬೇಕಿದ್ದ ವಿಮಾನಗಳನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಬೆಂಗಳೂರಿನಿಂದ ಜಮ್ಮು-ಕಾಶ್ಮೀರ, ರಾಜಸ್ಥಾನದ ಜೋಧಪುರ್, ಯುಪಿಯ ಅಯೋಧ್ಯೆ, ಲಖನೌ ಮತ್ತು ಘಾಜಿಯಾಬಾದ್ಗೆ ತೆರಳಬೇಕಿದ್ದ ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ.
ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಟ್ವೀಟ್ ಮಾಡಿದ್ದು, ಕೆಲವು ವಾಯುಯಾನ ಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಜಾರಿಯಲ್ಲಿದ್ದು, ಇದು ನಮ್ಮ ಸಂಪರ್ಕ ಜಾಲದಲ್ಲಿನ ಕೆಲವು ವಿಮಾನಗಳ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಈ ಕಾರಣ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ, ತಾವು ಪ್ರಯಾಣ ಮಾಡಲಿರುವ ವಿಮಾನಗಳ ವೇಳಾಪಟ್ಟಿಗಳ ಕುರಿತು ಆಯಾ ವಿಮಾನಯಾನ ಸಂಸ್ಥೆಗಳ ಜೊತೆಗೆ ಸಂಪರ್ಕಿಸಿ ಪರಿಶೀಲಿಸಲು ವಿನಂತಿಸಲಾಗಿದೆ. ಪ್ರಯಾಣಿಕರು ತಮ್ಮ ವಿಮಾನಗಳ ವೇಳಾಪಟ್ಟಿಯಲ್ಲಿನ ಬದಲಾವಣೆಗಳನ್ನು ಆಯಾ ವಿಮಾನಯಾನ ಸಂಸ್ಥೆಗಳ ಅಧಿಕೃತ ಟ್ವಿಟರ್ (ಎಕ್ಸ್) ಖಾತೆಗಳ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದೆ.