ಬೆಂಗಳೂರು:- ವಾಹನ ಸವಾರರೇ ಇದು ನೀವು ನೋಡಲೇಬೇಕಾದ ಸ್ಟೋರಿ. ಈ ರಸ್ತೆಯಲ್ಲಿ ಅಪ್ಪಿತಪ್ಪಿಯೂ ಸಂಚರಿಸಬೇಡಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಸಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ಮುಂದಾಗಿದೆ.
ನಾಲಾ ರಸ್ತೆ ಜಂಕ್ಷನ್‌ನಿಂದ ಪುರಭವನ ಜಂಕ್ಷನ್‌ವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯಲಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಭಾಗಶಃ ನಿಷೇಧ ಹೇರಲಾಗಿದೆ.
ಇಂದು ಬೆಳಗ್ಗೆ ಕಾಮಗಾರಿ ಶುರುವಾಗಲಿದ್ದು, ಕಾಮಗಾರಿ ಮುಕ್ತಾಯಾಗುವವರೆಗೂ ಮಾರ್ಗದಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಇರಲಿದೆ.
ಕಾಮಗಾರಿ ನಡೆಯುವ ಮಾರ್ಗದಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಕಾಮಗಾರಿ ಹಿನ್ನೆಲೆ ಪರ್ಯಾಯ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ಸೂಚಿಸಿದ್ದಾರೆ. ಹೊಸೂರು ರಸ್ತೆಯಿಂದ ಜೆಸಿ ರಸ್ತೆ ಮೂಲಕ ಮೆಜೆಸ್ಟಿಕ್ ಹಾಗೂ ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುತ್ತಿದ್ದ ವಾಹನಗಳು ಲಾಲ್‌ಬಾಗ್ ಮುಖ್ಯದ್ವಾರದ ಬಳಿ ಬಲಕ್ಕೆ ತಿರುವು ಪಡೆದು ಕೆ.ಎಚ್. ರಸ್ತೆ, ಶಾಂತಿನಗರ, ರಿಚ್ಮಂಡ್ ಆರ್.ಆರ್. ರಸ್ತೆಯ ಮೂಲಕ ಹಡ್ಸನ್ ವೃತ್ತ ತಲುಪಬಹುದಾಗಿದೆ.
ಸೌತ್ ಎಂಡ್ ವೃತ್ತದಿಂದ ಜೆ.ಸಿ. ರಸ್ತೆಯ ಮೂಲಕ ಮೆಜೆಸ್ಟಿಕ್ ಹಾಗೂ ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುತ್ತಿದ್ದ ವಾಹನಗಳು, ಮಿನರ್ವ ವೃತ್ತದ ಬಳಿ ಎಡಕ್ಕೆ ತಿರುವು ಪಡೆದು ಲಾಲ್‌ಬಾಗ್ ಪೋರ್ಟ್ ರಸ್ತೆ ಹಾಗೂ ಕೆ.ಆರ್. ರಸ್ತೆಯ ಮೂಲಕ ಕೆ.ಆರ್. ಮಾರುಕಟ್ಟೆ ತಲುಪಿ ಎಸ್.ಜೆ.ಪಿ. ರಸ್ತೆ, ಪುರಭವನ ಸಂಪರ್ಕ ಪಡೆಯಬಹುದು ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.