ಅಭಿಮಾನಿಗಳ ಜೊತೆ ನೇರವಾಗಿ ಸಿನಿಮಾ ವೀಕ್ಷಿಸುವ ಕ್ಷಣಗಳು ನಟರಿಗೆ ವಿಶೇಷವಾಗಿರುತ್ತವೆ. ಆದರೆ ಭದ್ರತೆ ಹಾಗೂ ನೂಕು–ನುಗ್ಗಲು ಕಾರಣದಿಂದಾಗಿ ನಟ ಕಿಚ್ಚ ಸುದೀಪ್ ಅವರು ಮೊದಲ ದಿನ ಫ್ಯಾನ್ಸ್ ಜೊತೆ ಸಿನಿಮಾ ನೋಡುವುದನ್ನು ಬಹುಕಾಲದಿಂದ ತಪ್ಪಿಸಿಕೊಂಡಿದ್ದರು. ಇದೀಗ ಅದೇ ಸುದೀಪ್, ‘ಮಾರ್ಕ್’ ಸಿನಿಮಾದ ಯಶಸ್ಸಿನ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲು ಮುಂದಾಗಿದ್ದಾರೆ.
ಡಿಸೆಂಬರ್ 31ರಂದು ಸುದೀಪ್ ಅವರು ಬೆಂಗಳೂರು ಹಾಗೂ ಮೈಸೂರಿನಲ್ಲಿ ಅಭಿಮಾನಿಗಳ ಜೊತೆ ‘ಮಾರ್ಕ್’ ಸಿನಿಮಾ ವೀಕ್ಷಿಸಲಿದ್ದಾರೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಬೆಳಿಗ್ಗೆ 10.30ರ ಶೋ, ಬಳಿಕ ಮೈಸೂರಿನ ಸಂಗಮ ಚಿತ್ರಮಂದಿರದಲ್ಲಿ ಸಂಜೆ 4.30ರ ಶೋನಲ್ಲಿ ಅವರು ಹಾಜರಾಗಲಿದ್ದಾರೆ. ಈ ಸುದ್ದಿ ತಿಳಿದ ಕೂಡಲೇ ಫ್ಯಾನ್ಸ್ಗಳಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ.
ಕಳೆದ ವರ್ಷ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಯಾದ ಬಳಿಕ, ಡಿಸೆಂಬರ್ 31ರಂದು ಸುದೀಪ್ ಅವರು ಪತ್ನಿ ಪ್ರಿಯಾ ಸೇರಿದಂತೆ ಆಪ್ತರ ಜೊತೆ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದನ್ನು ಅಭಿಮಾನಿಗಳು ಇನ್ನೂ ನೆನಪಿಸಿಕೊಳ್ಳುತ್ತಾರೆ. ಈ ಬಾರಿ ‘ಮಾರ್ಕ್’ ಸಿನಿಮಾದೊಂದಿಗೆ ಆ ಸಂಭ್ರಮ ಮತ್ತೆ ಮರುಕಳಿಸುತ್ತಿದೆ.
ಈ ಮೊದಲು “ಫಸ್ಟ್ ಡೇ ಸಿನಿಮಾ ನೋಡುವ ಬಗ್ಗೆ ಸದ್ಯಕ್ಕೆ ಆಲೋಚನೆ ಇಲ್ಲ. ಸಿನಿಮಾ ಚೆನ್ನಾಗಿ ಹೋದರೆ ಡಿಸೆಂಬರ್ 31ರಂದು ಫ್ಯಾನ್ಸ್ ಜೊತೆ ನೋಡುತ್ತೇನೆ” ಎಂದು ಸುದೀಪ್ ಹೇಳಿದ್ದರು. ಈಗ ಆ ಮಾತು ಕಾರ್ಯರೂಪಕ್ಕೆ ಬಂದಿದೆ.
ಡಿಸೆಂಬರ್ 25ರಂದು ಬಿಡುಗಡೆಯಾದ ‘ಮಾರ್ಕ್’ ಸಿನಿಮಾ ನಾಲ್ಕೇ ದಿನಗಳಲ್ಲಿ 35 ಕೋಟಿ ರೂ. ಕಲೆಕ್ಷನ್ ಮಾಡಿ, ಸುದೀಪ್ ಅವರ ವೃತ್ತಿ ಜೀವನಕ್ಕೆ ಮತ್ತೊಂದು ಸೂಪರ್ ಹಿಟ್ ಸೇರ್ಪಡೆಗೊಂಡಿದೆ.



