ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನಿಯಮಿತವಾಗಿ ನೀರು ಕುಡಿಯುವಂತೆ ಜ್ಞಾಪಿಸಲು ಇನ್ಮುಂದೆ ‘ವಾಟರ್ ಬೆಲ್’ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶಾಲಾ ಮಕ್ಕಳಲ್ಲಿ ನೀರು ಕುಡಿಯುವ ಅಭ್ಯಾಸಕ್ಕೆ ಅಗತ್ಯವಾದ ಅರಿವು ಕಡಿಮೆಯಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಆರೋಗ್ಯಕ್ಕೆ ನೀರು ಅತ್ಯಂತ ಅಗತ್ಯವಾಗಿದ್ದು, ದೇಹದ ಉಷ್ಣತೆಯನ್ನು ನಿಯಂತ್ರಿಸುವುದರ ಜೊತೆಗೆ ಆಹಾರ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಈ ಕಾರಣದಿಂದ ಎಲ್.ಕೆ.ಜಿ ಮತ್ತು ಯು.ಕೆ.ಜಿ ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಮಯ ನಿಗದಿಪಡಿಸಿ ವಾಟರ್ ಬೆಲ್ ಹೊಡೆದು ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.
ಈ ಕುರಿತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿತ್ತು. ಆಯೋಗದ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ, ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಸುತ್ತೋಲೆ ಹೊರಡಿಸಿ, ಶಾಲೆಗಳಲ್ಲಿ ಆಗಾಗ್ಗೆ ವಾಟರ್ ಬೆಲ್ ಬಾರಿಸಿ ವಿದ್ಯಾರ್ಥಿಗಳಲ್ಲಿ ನೀರು ಕುಡಿಯುವ ಅರಿವು ಮೂಡಿಸಲು ಆದೇಶಿಸಿದೆ. ಈ ಕ್ರಮದಿಂದ ಮಕ್ಕಳ ಆರೋಗ್ಯದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗಲಿದೆ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ.



