ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ಜನಜೀವನದ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಪರಿಸರ ಕಲುಷಿತಗೊಂಡರೆ, ಮನುಷ್ಯನ ಮನುಸ್ಸು ಕಲುಷಿತವಾಗುವುದು. ಮನುಷ್ಯ ಪರಿಸರದ ಶಿಶು ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2738ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನೀರು ಜೀವಜಲ, ಜೀವನಾಧಾರ. ಪ್ರಸ್ತುತ ನೀರು ಮಲಿನವಾಗುತ್ತಿದೆ. ಮಲಿನವಾದ ನೀರು ಹೊಳೆ-ಹಳ್ಳಗಳಿಗೆ ಸೇರುತ್ತಿದೆ. ಇದಕ್ಕೆಲ್ಲಾ ಕಾರ್ಖಾನೆಗಳು ಕಾರಣ. ಉದ್ದಿಮೆದಾರರು ಮಲಿನವಾದ ನೀರನ್ನು ಸಂಸ್ಕರಿಸಿ ನದಿಗಳಿಗೆ ಬಿಡಬೇಕು. ಆದರೆ ಅದು ಆಗುತ್ತಿಲ್ಲ. ನೀರಿನ ಮಿತವ್ಯಯ ಅವಶ್ಯವಾಗಿದೆ. ನೀರಿನ ಸಂಗ್ರಹಣೆ ಹೆಚ್ಚಬೇಕು. ಅಂತರ್ಜಲ ಕುಸಿಯುತ್ತಿದ್ದು, ಗಿಡ-ಮರಗಳನ್ನು ಬೆಳೆಸಬೇಕು. ಅವುಗಳು ಇಂಗಾಲದ ಡೈಆಕ್ಸೈಡನ್ನು ಹೀರಿ ಆಮ್ಲಜನಕ ಬಿಡುತ್ತವೆ. ಶುದ್ಧ ಆಮ್ಲಜನಕ ಬದುಕಿನ ಭರವಸೆ ಎಂದು ಶ್ರೀಗಳು ನುಡಿದರು.
ಮೃತ್ಯುಂಜಯ ಹಿರೇಮಠ, ಗುರುನಾಥ್ ಸುತಾರ ಮತ್ತು ಅಶೋಕ್ ಸುತಾರ ಸಂಗೀತ ಸೇವೆ ನೇರವೇರಿಸಿದರು. ಧಾರ್ಮಿಕ ಗ್ರಂಥ ಪಠಣವನ್ನು ಅನುಪಮಾ ಎ.ಬೆಟಗೇರಿ ಹಾಗೂ ವಚನ ಚಿಂತನವನ್ನು ಧನುಷಾ ಎಂ.ವೀರಶೆಟ್ಟರ ನಡೆಸಿದರು. ದಾಸೋಹ ಸೇವೆಯನ್ನು ಬಸಯ್ಯ ಚನ್ನಬಸಯ್ಯ ಮಠದ ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ, ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ವಿ.ಕುಂಬಾರ ಮಾತನಾಡಿ, ನೀರು ಜೀವನದ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತದೆ. ನೀರಿಲ್ಲದೆ ಬದುಕಿಲ್ಲ. ಬದುಕೇ ನೀರು, ನೀರೇ ಬದುಕು. ನೀರಿನ ಸಂಗ್ರಹಣೆ ಮಾಡಬೇಕು. ಕೆರೆ, ಹಳ್ಳ, ಬಾವಿಗಳು ತುಂಬಿ ಹರಿಯಬೇಕು. ನೀರಿದ್ದರೆ ಎಲ್ಲೆಲ್ಲೂ ಹಸಿರು. ಆದ್ದರಿಂದ ನೀರನ್ನು ಸಂಗ್ರಹಣೆ ಮಾಡಬೇಕು. ಮಳೆ ನೀರು ಕೊಯ್ಲಿಗೆ ಎಲ್ಲರೂ ಮುಂದಾಗಬೇಕು. ಶುದ್ಧ ನೀರು ಎಲ್ಲರಿಗೂ ಸಿಗುವಂತಾಗಬೇಕು. ಆರೋಗ್ಯವಾಗಿರಲು ನೀರು ಅತೀ ಅವಶ್ಯಕ ಎಂದು ತಿಳಿಸಿಕೊಟ್ಟರು.



