ವಿಜಯಸಾಕ್ಷಿ ಸುದ್ದಿ, ಡಂಬಳ: ಹಮ್ಮಿಗಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶಿಂಗಟಾಲೂರ ಏತ ನೀರಾವರಿ (ಹುಲಿಗುಡ್ಡ) ಯೋಜನೆಯಿಂದ ಮುಂಡರಗಿ, ಹಡಗಲಿ, ಕೊಪ್ಪಳ, ಗದಗ ಜಿಲ್ಲೆಯ ರೈತರಿಗೆ ವರದಾನವಾಗಿದ್ದು, ನೀರು ಬಳಸಿಕೊಳ್ಳುವ ರೈತರು ವಾಣಿಜ್ಯ ಬೆಳೆ ಬೆಳೆದು, ಆರ್ಥಿಕವಾಗಿ ಸಬಲತೆ ಹೊಂದುವಂತಾಗಿದೆ.
2013ರಲ್ಲಿ ಅಂದಿನ ಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಂಗಟಾಲೂರ ಯೋಜನೆ ನಾಡಿಗೆ ಸಮರ್ಪಣೆ ಮಾಡುತ್ತಿದ್ದಂತೆ ಈ ಭಾಗದ ಬರದ ನಾಡಾಗಿರುವ ಗದಗ, ಮುಂಡರಗಿ, ಹೂವಿನಹಡಗಲಿ, ಕೊಪ್ಪಳ ಭಾಗದ ರೈತರನ್ನು ಬರದ ದವಡೆಯಿಂದ ಪಾರು ಮಾಡಲಾಗಿದೆ. ಈ ಯೋಜನೆಯಿಂದ ಡಂಬಳದ ಬೃಹತ್ ಕೆರೆ, ಬಸಾಪೂರ ಕೆರೆ, ಹಿರೇವಡ್ಡಟ್ಟಿ ಕೆರೆ, ತಾಂಬರಗುಂಡಿ ಕೆರೆ, ಪೇಠಾಲೂರ ಕೆರೆ, ಜಂತ್ಲಿ-ಶಿರೂರ ಕೆರೆಗಳು ಭರ್ತಿಯಾಗಿರುವುದರಿಂದ ಈ ಭಾಗದ ರೈತರ ಮೊಗದಲ್ಲಿ ಹರ್ಷ ತುಂಬಿದೆ.
2013ರಲ್ಲಿ ಚುನಾವಣಾ ಪೂರ್ವ ಮಾತುಕೊಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಕೆ. ಪಾಟೀಲ ಹಾಗೂ ರೋಣದ ಜನಪ್ರಿಯ ಶಾಸಕ ಜಿ.ಎಸ್. ಪಾಟೀಲರ ಪ್ರಯತ್ನದ ಫಲವಾಗಿ ಶಿಂಗಟಾಲೂರ ಯೋಜನೆಯಿಂದ ರೈತರಿಗೆ ನೀರು ಸಿಗುವಂತಾಗಿ ಈ ಭಾಗದಲ್ಲಿ ಸಮೃದ್ಧಿ ನೆಲೆಸುವಂತಾಯಿತು. ಸತತ ಅನಾವೃಷ್ಟಿಯಿಂದ ಈ ಭಾಗದಲ್ಲಿ ಹಳ್ಳ-ಕೊಳ್ಳಗಳು ಬತ್ತಿ ಬರಿದಾಗಿದ್ದವು. ಈ ಭಾಗದ ರೈತ ಕುಟುಂಬಗಳು ಗೋವಾ, ಮಂಗಳೂರು, ಮಹಾರಾಷ್ಟ್ರಕ್ಕೆ ದುಡಿಯಲು ಗುಳೆ ಹೋಗಿ ರೈತರ ಜೀವನ ಕಷ್ಟದಾಯಕವಾಗಿತ್ತು.
ಕೆಲ ರೈತರು ಸಾಲದ ದವಡೆಯೆಗೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಗೆ ಹಣಕಾಸು ನೆರವು ನೀಡಿ 1991ರಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಕಾಯಕಲ್ಪ ನೀಡಿದರು. ಅಂದಿನ ಬೃಹತ್ ನೀರಾವರಿ ಸಚಿವರಾಗಿದ್ದ ಎಚ್.ಕೆ. ಪಾಟೀಲ ಹಾಗೂ ಶಾಸಕರಾದ ಜಿ.ಎಸ್. ಪಾಟೀಲರ ಮುತುವರ್ಜಿಯಿಂದ ಈ ಯೋಜನೆ ಪೂರ್ಣಗೊಂಡಿತು.
1991ರಲ್ಲಿ ಮುಂಡರಗಿ ಶಾಸಕರಾಗಿದ್ದ ಎಸ್.ಎಸ್. ಪಾಟೀಲ ಹಾಗೂ ಇನ್ನೋರ್ವ ಸಚಿವ ಎಂ.ಪಿ. ಪ್ರಕಾಶರವರು ಈ ಯೋಜನೆಗೆ 6 ಟಿ.ಎಂ.ಸಿ. ನೀರು ಬಳಕೆಗೆ ಮಂಜೂರಾತಿ ನೀಡಿ ಯೋಜನೆ ಆರಂಭಿಸಿದ್ದರು. ಎಚ್.ಕೆ. ಪಾಟೀಲರು ಬೃಹತ್ ನೀರಾವರಿ ಸಚಿವರಾಗುತ್ತಿದ್ದಂತೆ ಕೆ.ಸಿ. ರೆಡ್ಡಿಯವರ ವರದಿಯನ್ನು ಧಿಕ್ಕರಿಸಿ 18 ಟಿ.ಎಂ.ಸಿ. ನೀರು ಬಳಕೆಗೆ ಯೋಜನೆ ಸಿದ್ಧಪಡಿಸಿ ಮಂಜೂರಾತಿ ನೀಡಿದ್ದರು.
“ಈ ಭಾಗದಲ್ಲಿ ಬರಗಾಲ, ರೈತರ ಆತ್ಮಹತ್ಯೆಯನ್ನು ತಡೆಯಬೇಕು, ರೈತರ ತೊಂದರೆಯನ್ನು ತಪ್ಪಿಸಬೇಕು, ರೈತ ಸಮೂಹವನ್ನು ಆರ್ಥಿಕವಾಗಿ ಮುಖ್ಯ ಪ್ರವಾಹಕ್ಕೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಹಕಾರದ ಮೇರೆಗೆ ನೂರಾರು ಕೋಟಿ ಅನುದಾನ ತಂದು ಕೆರೆಗಳನ್ನು ಭರ್ತಿ ಮಾಡುವ ಯೋಜನೆಯನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ”
– ಜಿ.ಎಸ್. ಪಾಟೀಲ,
ರೋಣ ಮತಕ್ಷೇತ್ರದ ಶಾಸಕರು.
“ಶಿಂಗಟಾಲೂರ ಯೋಜನೆ ಪೂರ್ಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಚಿವ ಎಚ್.ಕೆ. ಪಾಟೀಲರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲರು ರೈತರ ಕಣ್ಣೀರು ಒರೆಸುವಲ್ಲಿ ನೆರವಾಗಿದ್ದಾರೆ. ಹೋಬಳಿಯ ಸಮಸ್ತ ರೈತ ಬಂಧುಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ”
– ಗೋಣಿಬಸಪ್ಪ ಕೊರ್ಲಹಳ್ಳಿ,
ಯುವ ಮುಖಂಡರು, ಡಂಬಳ.
ರೈತರಲ್ಲಿ ಹರ್ಷ
ಮಳೆಯ ಅಭಾವದಿಂದ ಬೇಸತ್ತಿದ್ದ ರೈತರಿಗೆ ಈ ಯೋಜನೆ ಭರವಸೆ ಬೆಳಕಾಯಿತು. ರೈತರು ಈ ನೀರು ಬಳಸಿಕೊಂಡು ಈರುಳ್ಳಿ, ಗೋವಿನಜೋಳ, ಹತ್ತಿ, ಕಬ್ಬು, ಸೂರ್ಯಕಾಂತಿ ಬೆಳೆದು, ತೋಟಗಾರಿಕಾ ಬೆಳೆಗಳಾದ ಪೇರಳೆ, ದಾಳಿಂಬೆ, ಬಾಳೆ ಇತ್ಯಾದಿಗಳನ್ನು ಬೆಳೆದು ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕೆರೆಗಳಲ್ಲಿ, ಹಳ್ಳ, ಸರೋವರಗಳಲ್ಲಿ ನೀರು ತುಂಬಿರುವುದರಿಂದ ಬತ್ತಿ ಹೋಗಿದ್ದ ಬೋರ್‌ವೆಲ್‌ಗಳಲ್ಲಿ ನೀರು ಚಿಮ್ಮುತ್ತಿದೆ. ಇದರಿಂದ ಬರ ದೂರವಾಗಿ ಈ ಭಾಗವೀಗ ಸಂಪೂರ್ಣ ಹಸಿರು ಸಮೃದ್ಧಿಯಿಂದ ಕಂಗೊಳಿಸುತ್ತಿದೆ.