ಬೆಂಗಳೂರು:- ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಬೆಂಗಳೂರು ಮಂದಿಗೆ ಜಲಮಂಡಳಿ ಮತ್ತೊಂದು ಶಾಕ್ ಕೊಟ್ಟಿದೆ. ಹೌದು ನಗರದಲ್ಲಿ ನೀರಿನ ದರ ಹೆಚ್ಚಳ ಮಾಡುವುದಾಗಿ ಜಲಮಂಡಳಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡುವ ಬಗ್ಗೆ ಕಳೆದ ಒಂದು ವರ್ಷದಿಂದ ಆಗಾಗ ಚರ್ಚೆ ನಡೆಯುತ್ತಿತ್ತು. ನೀರಿನ ದರ ಹೆಚ್ಚಳ ಅನಿವಾರ್ಯ ಎಂಬುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಕೆಲವು ಬಾರಿ ಹೇಳಿದ್ದರು. ಇದೀಗ ಜಲಮಂಡಳಿ ಅಧ್ಯಕ್ಷರು ನೀರಿನ ದರ ಏರಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಡೊಮೆಸ್ಟಿಕ್ ಕನೆಕ್ಷನ್ಗೆ ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳವಾಗಲಿದೆ. ಇದರಿಂದಾಗಿ, ಒಟ್ಟಾರೆಯಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇದೆ. ನೀರು ಬಳಕೆಯ ಆಧಾರದ ಮೇಲೆ ಸ್ಲ್ಯಾಬ್ಗಳನ್ನು ನಿಗದಿಪಡಿಸಲಾಗಿದ್ದು, ಎಷ್ಟು ಬಳಕೆಗೆ ಎಷ್ಟು ದರ ಏರಿಕೆಯಾಗಲಿದೆ ಎಂಬ ಬಗ್ಗೆ ರಾಮ್ ಪ್ರಸಾತ್ ಮನೋಹರ್ ವಿವರಗಳನ್ನು ನೀಡಿದ್ದಾರೆ.
ನೀರಿನ ದರ ಏರಿಕೆ ವಿವರ ಹೀಗಿದೆ:-
ಡೊಮೆಸ್ಟಿಕ್ ಕನೆಕ್ಷನ್ಗೆ ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳವಾಗಲಿದೆ.
0-8 ಸಾವಿರದೊಳಗೆ ಸ್ಲ್ಯಾಬ್ಗೆ ಲೀಟರ್ಗೆ 0.15 ಪೈಸೆ ಹೆಚ್ಚಳವಾಗಲಿದೆ.
8-25 ಸಾವಿರದೊಳಗಿನ ಸ್ಲ್ಯಾಬ್ಗೆ ಲೀಟರ್ಗೆ 0.40 ಪೈಸೆ ಹೆಚ್ಚಳವಾಗಲಿದೆ.
25 ಸಾವಿರ ಲೀಟರ್ಗಿಂತ ಹೆಚ್ಚು ಬಳಕೆ ಮಾಡಿದ್ರೆ 0.80 ಪೈಸೆ ಏರಿಕೆಯಾಗಲಿದೆ.
50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳವಾಗಲಿದೆ.
ಇನ್ನೂ ಪ್ರತಿ ವರ್ಷ ಏಪ್ರಿಲ್ 1ರಿಂದ ಶೇಕಡಾ 3ರಷ್ಟು ನೀರಿನ ದರ ಹೆಚ್ಚಳವಾಗಲಿದೆ. ಇದೀಗ ಸದ್ಯದ ತೀರ್ಮಾನದಿಂದಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗಬಹುದು. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50-60 ರೂ. ಹೊರೆಯಾಗಬಹುದು ಎಂದು ಅವರು ಹೇಳಿದ್ದಾರೆ.