ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದಲ್ಲಿ ಅತಿ ಶೀಘ್ರದಲ್ಲೇ 38 ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ನಿಲಯದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಬಳಿ 15ನೇ ಹಣಕಾಸು ಯೋಜನೆಯಡಿ 50.40 ಲಕ್ಷ ರೂ.ಗಳ ವೆಚ್ಚದಲ್ಲಿ ಆರ್ಸಿಸಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಪಟ್ಟಣದ ನಾಗರಿಕ ಸಮುದಾಯದ ಹಿತದೃಷ್ಟಿಯಿಂದ ಅಮೃತ ಯೋಜನೆಯನ್ನು ತರಲಾಗಿದ್ದು, ಕಾಮಗಾರಿ ಕೂಡ ಭರದಿಂದ ಸಾಗಿದೆ. ಅಮೃತ ಯೋಜನೆಯಿಂದ ನೀರಿನ ಸಮಸ್ಯೆ ತಗ್ಗಲಿದೆ. ಅಲ್ಪಸಂಖ್ಯಾತರ ವಸತಿ ಶಾಲೆಗೆ 10 ಕೋಟಿ ರೂ.ಗಳ ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುವುದು. ಪಟ್ಟಣದ ಹೃದಯ ಭಾಗದಲ್ಲಿರುವ ಶಾನಭೋಗರ ಕೆರೆ ಅಭಿವೃದ್ಧಿಗಾಗಿ 1 ಕೋಟಿ ರೂ.ಗಳ ಅನುದಾನವನ್ನು ತರಲಾಗಿದೆ ಎಂದರು.
ಪಟ್ಟಣ ಪ್ರದೇಶಗಳು ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗಿವೆ. ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಅನುದಾನವನ್ನು ಒದಗಿಸುತ್ತಿದೆ ಎಂಬುದನ್ನು ನಾಗರಿಕ ಸಮಾಜ ಮರೆಯಬಾರದು ಎಂದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ವಿ.ಆರ್. ಗುಡಿಸಾಗರ, ಮುತ್ತಣ್ಣ ಸಂಗಳದ, ತೋಟಪ್ಪ ನವಲಗುಂದ, ಬಾವಾಸಾಬ ಬೆಟಗೇರಿ, ಬಸವರಾಜ ನವಲಗುಂದ, ವಿ.ಬಿ. ಸೋಮನಕಟ್ಟಿಮಠ, ಯೂಸುಪ್ ಇಟಗಿ, ಪರಶುರಾಮ ಅಳಗವಾಡಿ, ದುರ್ಗಪ್ಪ ಹಿರೇಮನಿ, ದಾವಲಸಾಬ ಬಾಡಿನ, ಸಂಜಯ ದೊಡ್ಡಮನಿ, ಮಲಿಕ ಯಲಿಗಾರ, ಅಸ್ಲಂ ಕೊಪ್ಪಳ, ರಂಗವ್ವ ಭಜಂತ್ರಿ, ಮುಖ್ಯಾಧಿಕಾರಿ ರಮೇಶ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.
ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೋಲ್ಡ್ ಸ್ಟೋರೇಜ್ನ್ನು ಪಟ್ಟಣಕ್ಕೆ ತರಲಾಗಿದ್ದು, ಈ ಯೋಜನೆಯಿಂದ ರೈತರಿಗೆ ಲಾಭವಾಗಲಿದೆ. ಪಟ್ಟಣದ ಎಲ್ಲ ವಾರ್ಡ್ಗಳ ಪ್ರಗತಿಗಾಗಿ ಸಾಕಷ್ಟು ಅನುದಾನವನ್ನು ಒದಗಿಸಲಾಗಿದ್ದು, ಸಿಸಿ ರಸ್ತೆ ಕಾಮಗಾರಿಗಳು ಸಹ ನಡೆಯುತ್ತಿವೆ. ಮುಖ್ಯವಾಗಿ 20 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ಸಹ ಪ್ರಗತಿಯತ್ತ ಸಾಗಿದ್ದು, ಇನ್ನೂ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳು ರೋಣ ಪಟ್ಟಣಕ್ಕೆ ಬರಲಿವೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.



