ಹಾವೇರಿ:- ಜಿಲ್ಲೆ ಹಾನಗಲ್ ತಾಲ್ಲೂಕಿನ ಆಡೂರು ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಕಾರ್ಣಿಕ ನುಡಿಯಲಾಗಿದೆ. ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್ ಎಂದು 12 ಅಡಿ ಎತ್ತರದ ಬಿಲ್ಲೇರಿ ಗೊರವಯ್ಯ ಹನುಮನಗೌಡ ಗುರೇಗೌಡರ ದೈವವಾಣಿ ನುಡಿದಿದ್ದಾರೆ.
ಮೈಲಾರ ಕಾರ್ಣಿಕದ ಅರ್ಥವನ್ನು ಗ್ರಾಮಸ್ಥರು ತಿಳಿಸಿದ್ದು, ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ ಎಂದು ವಿಶ್ಲೇಷಿಸಿದ್ದಾರೆ. ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಉತ್ತಮವಾಗಿದ್ದ ಕಾರಣ ರಾಜ್ಯದಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಮುಖ್ಯವಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ಬೇಸಿಗೆಯಲ್ಲೂ ಈ ಬಾರಿ ನೀರಿಗೆ ಸಮಸ್ಯೆ ಇರುವುದಿಲ್ಲ ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನು ಈ ವರ್ಷ ಕೂಡ ಉತ್ತಮ ಮಳೆಯಾದರೆ ರಾಜ್ಯದ ಕೆರೆ ಕಟ್ಟೆಗಳು ಭರ್ತಿಯಾಗಲಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ.
ಕಾರ್ಣಿಕಗಳನ್ನು ರಾಜ್ಯದ ಜನ ನಂಬುತ್ತಾರೆ ಅನೇಕ ಬಾರಿ ಕಾರ್ಣಿಕಗಳು ನಿಜವಾದದ್ದೂ ಇದೆ. ಕಳೆದ ವರ್ಷ ಹೂವಿನಹಡಗಲಿ ತಾಲೂಕಿನ ಮೈಲಾರದ ಐತಿಹಾಸಿಕ ಮೈಲಾರಲಿಂಗ ಸಂಪಾಯಿತಲೇ ಪರಾಕ್ ಎಂದು ನುಡಿದಿದ್ದ ಕಾರ್ಣಿಕ ನಿಜವಾಗಿತ್ತು. ದೈವವಾಣಿಯಂತೆ ರಾಜ್ಯದಲ್ಲಿ ಮಳೆ ಉತ್ತಮವಾಗಿತ್ತು. 2023ರಲ್ಲಿ ಬರಗಾಲದಿಂದ ತತ್ತರಿಸಿದ್ದ ಕರ್ನಾಟಕ ರಾಜ್ಯಕ್ಕೆ ಈ ಕಾರ್ಣಿಕ ನಿಟ್ಟುಸಿರು ಬಿಡುವಂತೆ ಮಾಡಿತ್ತು. ನಂಬಿಕೆಯಂತೆ ರಾಜ್ಯಾದ್ಯಂತ ಭರ್ಜರಿ ಮಳೆಯಾಗಿದ್ದು, ಎಲ್ಲಾ ಜಲಾಶಯಗಳು ತುಂಬಿ ಹರಿದಿವೆ.