ಬೆಂಗಳೂರು:- ವಯನಾಡ್ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕರ್ನಾಟಕದ 9 ಜನರ ಪೈಕಿ 8 ಜನರ ಶವ ಪತ್ತೆಯಾಗಿದೆ.
ಗುರುಮಲ್ಲನ್(60), ಸಾವಿತ್ರಿ(54), ಶಿವಣ್ಣ(50), ಅಪ್ಪಣ್ಣ(39), ಅಶ್ವಿನಿ(13), ಜೀತು(11), ದಿವ್ಯಾ(35), ಶ್ರೇಯಾ(19) ಎಂಬುವರ ಮೃತದೇಹ ಪತ್ತೆ ಆಗಿದೆ. ಮೃತರ ಸಾವಿನ ಬಗ್ಗೆ ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ಖಚಿತ ಪಡಿಸಿದ್ದಾರೆ.
ಸುಮಾರು 60 ವರ್ಷಗಳ ಹಿಂದೆ ಕೇರಳಕ್ಕೆ ಆಗಮಿಸಿದ್ದ ಮಾದೇವಿ ಎಂಬುವವರ ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಮೃತಪಟ್ಟಿದ್ದಾರೆ. ಸವಿತಾ ಎಂಬುವವರ ಶವಕ್ಕಾಗಿ ರಕ್ಷಣಾ ಸಿಬ್ಬಂದಿ ಶೋಧ ನಡೆದಿಸಿದ್ದಾರೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ರಾಜ್ಯ ಸರ್ಕಾರ ಸಹಾಯ ಹಸ್ತ ಚಾಲಿದೆ. ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಾಗೆಯೇ ಗಡಿಜಿಲ್ಲೆ ಚಾಮರಾಜ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಕೂಡ ತೆರೆಯಲಾಗಿದೆ.
ಇನ್ನು ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಮೃತಪಟ್ಟ ಕನ್ನಡಿಗರು ಮತ್ತು ಇನ್ನೂ ಹಲವರು ಸಿಲುಕಿರುವ, ನಾಪತ್ತೆಯಾಗಿರುವ ಮಾಹಿತಿ ಕಲೆ ಹಾಕಿದ್ದರು. ಅವರೆಲ್ಲರ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದರು.