ಪ್ರಕೃತಿಯ ಮುಂದೆ ನಾವೆಲ್ಲ ತೃಣ ಸಮಾನರು: ಡಾ.ಪಾವಗಡ ಪ್ರಕಾಶ್ ರಾವ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನು ತನ್ನ ತಾಮಸ, ರಾಜಸ ಗುಣಗಳನ್ನು ತ್ಯಜಿಸಿ ಪರಮ ಸಾತ್ವಿಕತೆಯನ್ನು ರೂಢಿಸಿಕೊಳ್ಳುವ ಮೂಲಕ ದೈವಿಕ ಸ್ಥಾನಕ್ಕೆ ಏರಬಹುದು ಎಂಬುದಾಗಿ ಭಗವದ್ಗೀತೆಯ ೧೫ನೇ ಅಧ್ಯಾಯದಲ್ಲಿ ತಿಳಿಸಲಾಗಿದೆ ಎಂದು ಪ್ರವಚನ ಭಾಸ್ಕರ ಡಾ. ಪಾವಗಡ ಪ್ರಕಾಶ್ ರಾವ್ ತಿಳಿಸಿದರು.

Advertisement

ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ ೭ನೇ ದಿನದ ಪ್ರವಚನ ನೀಡಿ ಮಾತನಾಡಿ, ಪರಮ ಸಾತ್ವಿಕತೆಯನ್ನು ಸಂಪಾದಿಸಲು ಜ್ಞಾನ ಮಾರ್ಗ ಹಾಗೂ ಭಕ್ತಿ ಮಾರ್ಗ ಎಂಬ ಎರಡು ದಾರಿಗಳಿವೆ. ಅನೇಕರು ಜ್ಞಾನ ಮಾರ್ಗಕ್ಕಿಂತ ಭಕ್ತಿ ಮಾರ್ಗವೇ ಸರಳ ಎಂದು ಭಾವಿಸಿದ್ದಾರೆ. ಆದರೆ ಭಕ್ತಿ ಮಾರ್ಗವು ಅತ್ಯಂತ ತಾಳ್ಮೆ ಹಾಗೂ ಪರಿಶುದ್ಧತೆಯನ್ನು ಬೇಡುತ್ತದೆ. ನಮ್ಮನ್ನು ನಾವು ಶೂನ್ಯ ಮಾಡಿಕೊಂಡು ಸಕಲವೂ ದೈವವೇ ಎನ್ನುವುದು ನಿಜ ಭಕ್ತಿ.

`ಗುಣತ್ರಯ ವಿಭಾಗ ಯೋಗ’ ಎಂದಿರುವ ಶ್ರೀಕೃಷ್ಣ ಪರಮಾತ್ಮನು ನಿರಂತರ ತಪಸ್ಸು ಹಾಗೂ ಅದರ ಫಲವಾಗಿ ದಕ್ಕುವ ಪರಮ ಸಾತ್ವಿಕತೆಯ ಮಹತ್ವವನ್ನು ವಿವರಿಸಿದ್ದಾನೆ. ಮನುಷ್ಯನ ದೇಹವನ್ನು ‘ಕ್ಷೇತ್ರ’ ಎಂದು ಹಾಗೂ ಈ ಕ್ಷೇತ್ರದ ಮಾಲೀಕನನ್ನು ‘ಕ್ಷೇತ್ರಜ್ಞ’ ಎಂದು ಕರೆಯಲಾಗಿದೆ. ಇದರ ವ್ಯಾಖ್ಯಾರ್ಥ ಮನುಷ್ಯನೇ ತನ್ನ ದೇಹದ ಮಾಲೀಕ ಎನಿಸುತ್ತದೆ. ಆದರೆ ಮುಂದಿನ ಶ್ಲೋಕದಲ್ಲಿ ಮನುಷ್ಯನನ್ನು ಮೀರಿದ ಶಕ್ತಿಯು ಅರ್ಥಾತ್ ಕೃಷ್ಣ ಪರಮಾತ್ಮನು ಕ್ಷೇತ್ರದ ಮಾಲೀಕ ಎನಿಸಿಕೊಳ್ಳುತ್ತಾನೆ.

ಮನುಷ್ಯ ಸಾಧ್ಯತೆಗಳನ್ನೆಲ್ಲ ಮೀರಿ ಭೂಮಿಯ ಮೇಲಿನ ಪ್ರತಿ ಕ್ರಿಯೆಯೂ ಯಾವುದೋ ಒಂದು ಶಕ್ತಿಯ ಆಣತಿಯಂತೆ ನಡೆಯುತ್ತಿರುತ್ತದೆ. ಮನುಷ್ಯ ಏನೆಲ್ಲಾ ಸಂಪಾದಿಸಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ಆತ ಪರಾವಲಂಬಿಯೇ ಆಗಿದ್ದಾನೆ. ಮನುಷ್ಯ ಪ್ರಭುತ್ವ ಎಂಬುದು ಭ್ರಮೆಯಾಗಿದ್ದು, ಈ ಪ್ರಕೃತಿಯ ಮುಂದೆ ನಾವೆಲ್ಲ ತೃಣ ಸಮಾನ ಎಂದರು.

ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ. ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here