ಎದುರಾಳಿಗೆ ನಾವು ಸಮಬಲರಲ್ಲ..ಅವರಿಗೆ ಇರುವ ಹಣಬಲ…ಸಮಾಜದ ಬಲ ನಮಗೆ ಇಲ್ಲ….
ವಿಜಯಸಾಕ್ಷಿ ಸುದ್ದಿ, ನರಗುಂದ
ನಾವು ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದೇವೆ. ಸುಮಾರು 71000ಕ್ಕೂ ಅಧಿಕ ಜನರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಅಂತಿಮವಾಗಿ ಸೋಲನ್ನು ಒಪ್ಪಿಕೊಳ್ಳಲೇಬೇಕು. ನಮ್ಮ ಎದುರಾಳಿಯ ಅಭ್ಯರ್ಥಿಗೆ ಕೆಲವು ವಿಷಯಗಳಲ್ಲಿ ನಾವು ಸರಿಸಮರಾಗಲು ಸಾಧ್ಯವಿಲ್ಲ. ಅವರಿಗಿದ್ದ ಹಣಬಲ, ಸಮಾಜದ ಬಲ ನಮಗೆ ಇರಲಿಲ್ಲ ಎಂದು ನರಗುಂದ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಬಿ ಆರ್ ಯಾವಗಲ್ ಬೇಸರ ವ್ಯಕ್ತಪಡಿಸಿದರು.
ನರಗುಂದ ಪಟ್ಟಣದ ಮಲಪ್ರಭಾ ಆಯಿಲ್ ಮಿಲ್‌ನಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಬಿ ಆರ್ ಯಾವಗಲ್, ಇದುವರೆಗೂ ಯಾವುದು ನಮ್ಮ ಕ್ಷೇತ್ರದಲ್ಲಿ ನಡೆಯಬಾರದು ಅಂದುಕೊಂಡಿದ್ದೆವೋ ಅದು ಈ ಚುನಾವಣೆಯಲ್ಲಿ ನಡೆದು ಹೋಯಿತು. ಆದರೆ, ನನ್ನ ನಂಬಿಕೆಯಂತೆ ಸಾಕಷ್ಟು ಜನರು ಹಣದ ಆಮಿಷಕ್ಕೆ, ಒತ್ತಡಕ್ಕೆ, ಪ್ರಭಾವಕ್ಕೆ ಬಲಿಯಾಗದೆ ಮತಚಲಾಯಿಸಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ನಾವು ನಮ್ಮ ಎದುರಾಳಿಯಿಂದ ಸೋತಿಲ್ಲ. ನಮ್ಮ ಜೊತೆಗಿರುವ ನಮ್ಮ ಸ್ನೇಹಿತರಿಂದಲೇ ಸೋತಿದ್ದೇವೆ. ಈ ಪ್ರವೃತ್ತಿ 2018ರಿಂದಲೂ ಕ್ಷೇತ್ರದಲ್ಲಿ ಬೇರೂರಿದೆ. ಇದು ಬದಲಾಗಬೇಕು. 8 ಸುತ್ತಿನವರೆಗೂ ನಾವು ಮುಂದೆಯೇ ಇದ್ದೆವು. ಮುಂದಿನ ಸುತ್ತುಗಳಲ್ಲಿ ಸ್ವಲ್ಪ ಹಿನ್ನೆಡೆ ಅನುಭವಿಸಿದ್ದೇವೆ. ಪಕ್ಷದ ಸೋಲಿಗೆ ಕಾರಣವಾದವರನ್ನು ಪಕ್ಷದಿಂದ ಉಚ್ಛಾಟಿಸಿ ಎಂಬ ಕಾರ್ಯಕರ್ತರ ಒತ್ತಾಯವನ್ನು ಅಲ್ಲಿಗೇ ಬಿಟ್ಟು, ಅವರನ್ನು ನಿರ್ಲಕ್ಷಿಸೋಣ ಎಂದರು.
ಈ ಸಂದರ್ಭದಲ್ಲಿ ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿವೇಕ್ ಯಾವಗಲ್, ಮಾಧ್ಯಮ ವಕ್ತಾರ ರಾಜು ಕಲಾಲ, ರಾಜೂಗೌಡ ಕೆಂಚನಗೌಡರ, ಬಾಬು ಹಿರೆಹೊಳಿ, ಶಂಕ್ರಣ್ಣ ಪೈಲ್ವಾನ್, ಅಪ್ಪಣ್ಣ ನಾಯಕರ, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಒಂದು ಸಿದ್ಧಾಂತ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಇದೆ. 130 ವರ್ಷದ ಇತಿಹಾಸವನ್ನು ಕಾಂಗ್ರೆಸ್ ಪಕ್ಷ ಹೊಂದಿದೆ. ದಲಿತರು, ಅಲ್ಪಸಂಖ್ಯಾತರು, ಎಲ್ಲರನ್ನೂ ಒಟ್ಟುಗೂಡಿಸಿ ಮುಂದೆ ಸಾಗೋಣ. ಪಕ್ಷವನ್ನು ಪುನಃ ಸಂಘಟಿಸೋಣ. ನಮ್ಮವರೇ ಆದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರವಿದೆ. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷದ ಪರವಾಗಿ, ನನಗೆ ಬೆಂಗಾವಲಾಗಿ ನಿಂತ ನಿಮ್ಮೆಲ್ಲರಿಗೂ ಧನ್ಯವಾದಗಳು.
-ಬಿ ಆರ್ ಯಾವಗಲ್. ಪರಾಜಿತ ಕಾಂಗ್ರೆಸ್ ಅಭ್ಯರ್ಥಿ.