ವಿಜಯಪುರ: ಬಿಜೆಪಿ ಮನೆಯಲ್ಲಿನ ಬಣ ಬಡಿದಾಟ ಕ್ಷಣಕ್ಷಣಕ್ಕೂ ಭುಗಿಲೇಳುತ್ತಲೇ ಇದೆ. ಪ್ರಾರಂಭದಲ್ಲಿ ಏಕಾಂಗಿಯಾಗಿ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದ ಯತ್ನಾಳ್ ಬಣದ ಶಕ್ತಿ ಮತ್ತಷ್ಟು ಹೆಚ್ಚಾಗುತ್ತಿದೆ. ಇದೀಗ ಯಡಿಯೂರಪ್ಪ ಅವರ ಮಗನ ಕರ್ಮಕಾಂಡದ ಬಗ್ಗೆ ವಿವರಿಸಲು ಹೊರಟಿದ್ದೇವೆ ಎಂದು ವಿಜಯೇಂದ್ರ ವಿರುದ್ಧ ಯತ್ನಾಳ್ ರವರು ಮತ್ತೊಮ್ಮೆ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ತಟಸ್ಥರಿದ್ದವರು ಇದೀಗ ನಮ್ಮ ನಿಷ್ಠಾವಂತರ ಗುಂಪು ಸೇರಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲು ಹೊರಟಿದ್ದೇವೆ. ವಂಶಪಾರಂಪರಿಕ, ಕುಟುಂಬಶಾಹಿ ವಿರುದ್ಧ ನಮ್ಮ ಹೋರಾಟ ಇದೆ. ಯಡಿಯೂರಪ್ಪ ಅವರ ಮಗನ ಕರ್ಮಕಾಂಡದ ಬಗ್ಗೆ ವಿವರಿಸಲು ಹೊರಟಿದ್ದೇವೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಕುಟುಂಬಶಾಹಿ ರಾಜಕಾರಣ ಬಿಜೆಪಿಯಲ್ಲಿ ಕೊನೆಗೊಳ್ಳಬೇಕು. ಭ್ರಷ್ಟಾಚಾರ ಕುಟುಂಬ ಈ ರಾಜ್ಯದಿಂದ ತೊಲಗಬೇಕು. ಹಿಂದುತ್ವದ ಪರ ಇರುವ ನಾಯಕತ್ವ ಬರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಯಾರು ಕೂಡ ಹಿಂದುತ್ವದ ರಕ್ಷಣೆ ಮಾಡಲಿಲ್ಲ. ಹಿಂದೂಗಳ ಕೊಲೆಯಾದರೂ ಯಾರು ಕೇಳಲಿಲ್ಲ. ಕೇವಲ ಕಠಿಣ ಕ್ರಮ ಅನ್ನೋದನ್ನು ಬಿಟ್ಟರೆ ಏನು ಮಾಡಲಿಲ್ಲ. ಅದಕ್ಕಾಗಿಯೇ ರಾಜ್ಯದಲ್ಲಿ ಬಿಜೆಪಿ ಹೀನಾಯ ಪರಿಸ್ಥಿತಿ ತಲುಪಿದೆ ಎಂದರು.