HomeGadag Newsನಮ್ಮ ಬದುಕಿನ ದೋಣಿಗೆ ನಾವೇ ನಾಯಕರು: ರಂಭಾಪುರಿ ಶ್ರೀಗಳು

ನಮ್ಮ ಬದುಕಿನ ದೋಣಿಗೆ ನಾವೇ ನಾಯಕರು: ರಂಭಾಪುರಿ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬ್ಯಾಡಗಿ: ಬದುಕು ಕೊಟ್ಟ ಭಗವಂತನ ಲೀಲೆ ಅದ್ಭುತ. ಬದುಕು ಅನ್ನುವುದು ಕಷ್ಟ-ಸುಖ, ನೋವು-ನಲಿವು ಸಮಸ್ಯೆಗಳ ಸಾಗರದಲ್ಲಿ ಚಲಿಸುವ ದೋಣಿ ಇದ್ದಂತೆ. ಬೇರೆ ಯಾರೋ ಚಲಾಯಿಸಿ ದಡ ಸೇರಿಸುವರೆಂಬ ಭ್ರಮೆ ಬೇಡ. ನಮ್ಮ ಬದುಕಿನ ದೋಣಿಗೆ ನಾವೇ ನಾಯಕರು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಗುರುವಾರ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜರುಗಿದ ಕಾರ್ತೀಕ ದೀಪೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಒಳ್ಳೆಯ ಸ್ನೇಹ ಅದೊಂದು ಪ್ರಜ್ವಲಿಸುವ ಜ್ಯೋತಿ. ಅದು ಕತ್ತಲಲ್ಲಿ ದಾರಿ ತೋರಬಲ್ಲದು. ಆಪತ್ಕಾಲದಲ್ಲಿ ನೆರವು ನೀಡಬಲ್ಲದು. ಹೊರಗಿನ ಕತ್ತಲೆ ಕಳೆಯಲು ಹಣತೆ ಬೇಕು. ಒಳಗಿರುವ ಕತ್ತಲೆ ಕಳೆಯಲು ಒಬ್ಬ ಗುರು ಬೇಕು. ಎದುರಿಗಿರುವ ಶತ್ರುಗಳನ್ನು ಎದುರಿಸುವುದು ಸುಲಭ. ಆದರೆ ಮಿತ್ರರಂತೆ ನಟಿಸುತ್ತ ಜೊತೆಗಿರುವ ಶತ್ರುವನ್ನು ಎದುರಿಸುವುದು ಬಲು ಕಷ್ಟ. ಮನುಷ್ಯನಲ್ಲಿ ದಡ್ಡತನ ಇದ್ದರೂ ಪರವಾಗಿಲ್ಲ. ಆದರೆ ಸಣ್ಣತನ ಇರಬಾರದು. ಯಾಕೆಂದರೆ ಮನುಷ್ಯ ಗೌರವ ಕಳೆದುಕೊಳ್ಳುವುದು ದಡ್ಡತನದಿಂದಲ್ಲ, ಸಣ್ಣತನದಿಂದ ಎಂಬುದನ್ನು ಮರೆಯಬಾರದು. ನಂಬಿ ಬದುಕುವುದರಲ್ಲಿ ಸುಖ ಶಾಂತಿಯಿದೆ. ಧರ್ಮದ ಆಶ್ರಯದಲ್ಲಿ ಮನುಷ್ಯ ಮುನ್ನಡೆದರೆ ಬಾಳು ಉಜ್ವಲಗೊಳ್ಳುತ್ತದೆ. ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿ ವರುಷ ಮಂಜುನಾಥ ಶಾಸ್ತಿçಗಳು ಕಾರ್ತೀಕ ದೀಪೋತ್ಸವದ ಮೂಲಕ ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿರುವುದು ತಮಗೆ ಸಂತೋಷ ತಂದಿದೆ ಎಂದರು.

ಈ ಪವಿತ್ರ ಸಮಾರಂಭದಲ್ಲಿ ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು,  ರಾಣೆಬೆನ್ನೂರು ಶಿವಯೋಗಿ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಗುಡ್ಡದಮಲ್ಲಾಪುರದ ಮೂಕಪ್ಪ ಶಿವಾಚಾರ್ಯರು, ಬ್ಯಾಡಗಿ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಎಚ್.ಶೆಟ್ಟರ್, ಸುನಂದಾ ಕೆ.ರವೀಂದ್ರ ಕುಂಕೋದ, ಇಂದುಧರಯ್ಯ ಹಿರೇಮಠ, ಚಂದ್ರಪ್ಪ ಕಾರಗಿ, ಗಿರೀಶಗೌಡ್ರು ಪಾಟೀಲ ಸೇರಿದಂತೆ ಹಲವಾರು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಶಿರಡಿ ಸಾಯಿಬಾಬಾ ಮಂದಿರದ ಮುಖ್ಯಸ್ಥರಾದ ಮಂಜುನಾಥ ಶಾಸ್ತ್ರಿಗಳು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಶೋಭಾ ಶಿವಾನಂದ ಮಲ್ಲನಗೌಡ್ರ ಇವರಿಂದ ಪ್ರಾರ್ಥನೆ ಜರುಗಿತು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ಬೆಳಿಗ್ಗೆ ಲೋಕಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜಾ ನೆರವೇರಿಸಿದರು. ಸಮಾರಂಭದ ನಂತರ ಕಾರ್ತೀಕ ದೀಪೋತ್ಸವ ಸಂಭ್ರಮದಿಂದ ಜರುಗಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!