ನವದೆಹಲಿ:- ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರವನ್ನುದ್ದೇಶಿಸಿ ಭಾನುವಾರ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರರಿಗೆ ಗೌರವಾರ್ಪಣೆ ಸಲ್ಲಿಸಿದರು.
ನಾವು ಭಾರತೀಯರು ಅಪಾರ ಉತ್ಸಾಹದಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಇದು ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಅವಲೋಕಿಸಲು ಸೂಕ್ತವಾದ ಸುದಿನವಾಗಿದೆ ಎಂದು ಅವರು ಹೇಳಿದರು. 1950ರ ಜನವರಿ 26ರಿಂದ ಸಂವಿಧಾನ ಸಂಪೂರ್ಣವಾಗಿ ಜಾರಿಯಾಗಿದ್ದು, ಅದೇ ದಿನದಿಂದ ನಮ್ಮ ಗಣತಂತ್ರವು ಸಾಂವಿಧಾನಿಕ ಗುರಿಗಳತ್ತ ಮುನ್ನಡೆಯುತ್ತಿದೆ. ವಿಶ್ವದ ಅತಿದೊಡ್ಡ ಗಣತಂತ್ರ ರಾಷ್ಟ್ರವಾಗಿರುವ ಭಾರತಕ್ಕೆ ಸಂವಿಧಾನವೇ ಮೂಲ ಆಧಾರ ದಾಖಲೆ. ಸಂವಿಧಾನವನ್ನು ರೂಪಿಸಿದವರು ರಾಷ್ಟ್ರದ ಏಕತೆ ಮತ್ತು ರಾಷ್ಟ್ರೀಯತೆಗೆ ಭದ್ರ ಬುನಾದಿ ಹಾಕಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.
ಈ ಸಂದರ್ಭದಲ್ಲಿ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿರುವ ವಿಚಾರವನ್ನು ಪ್ರಸ್ತಾಪಿಸಿದ ಅವರು, ವಂದೇ ಮಾತರಂ ದೇಶದ ಜನರ ಹೃದಯದಲ್ಲಿ ದೇಶಭಕ್ತಿಯನ್ನು ಉರಿಯುವ ಅಮೋಘ ಗೀತೆ ಎಂದು ಬಣ್ಣಿಸಿದರು. ರಾಷ್ಟ್ರೀಯವಾದಿ ಕವಿ ಸುಬ್ರಹ್ಮಣ್ಯ ಭಾರತಿ ಅವರು ತಮಿಳಿನಲ್ಲಿ “ವಂದೇ ಮಾತರಂ ಎನ್ಬೋಮ್” ಎಂದು ಹಾಡು ರಚಿಸಿದ್ದು, ಅದು ಜನರನ್ನು ಇನ್ನಷ್ಟು ವ್ಯಾಪಕವಾಗಿ ತಲುಪಲು ಸಹಾಯವಾಯಿತು. ಇತರ ಭಾರತೀಯ ಭಾಷೆಗಳಲ್ಲಿಯೂ ವಂದೇ ಮಾತರಂ ಅನುವಾದಗಳು ಜನಪ್ರಿಯವಾಗಿವೆ ಎಂದು ಹೇಳಿದರು.
ಭಾಷಣದಲ್ಲಿ ಜಿಎಸ್‌ಟಿ ಸುಧಾರಣೆ ಹಾಗೂ ಆಪರೇಷನ್ ಸಿಂದೂರ್‌ನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು. ಜೊತೆಗೆ ದೇಶಕ್ಕೆ ಆಹಾರ ಭದ್ರತೆ ಒದಗಿಸುತ್ತಿರುವ ರೈತರ ಪರಿಶ್ರಮವನ್ನು ಪ್ರಶಂಸಿಸಿದರು. ಜನವರಿ 25ರ ರಾಷ್ಟ್ರೀಯ ಮತದಾರರ ದಿನವನ್ನು ಉಲ್ಲೇಖಿಸಿದ ಮುರ್ಮು ಅವರು, ಮತದಾನದಿಂದ ರಾಜಕೀಯ ಶಿಕ್ಷಣ ಲಭ್ಯವಾಗುತ್ತದೆ ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು. ಇಂದು ಅದು ಸಾಕಾರಗೊಳ್ಳುತ್ತಿದೆ ಎಂದರು. ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ಗಣತಂತ್ರಕ್ಕೆ ಮತ್ತಷ್ಟು ಬಲ ನೀಡುತ್ತದೆ ಎಂದು ಹೇಳಿದರು.
ಸಬಲೀಕೃತ ಮಹಿಳೆಯು ದೇಶದ ಅಭ್ಯುದಯಕ್ಕೆ ಅತ್ಯಂತ ಅಗತ್ಯ. ಆರೋಗ್ಯ, ಶಿಕ್ಷಣ, ಸುರಕ್ಷತೆ ಹಾಗೂ ಆರ್ಥಿಕ ಸಬಲೀಕರಣಕ್ಕೆ ಕೈಗೊಳ್ಳಲಾದ ಕ್ರಮಗಳು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ನೆರವಾಗಿವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟರು.



