ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ಭಾರತೀಯ ಯೋಧರು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಷ್ಟç ರಕ್ಷಣೆಗಾಗಿ ದೇಶ ಕಾಯುವ ಯೋಧರಲ್ಲಿ ನೈತಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು, ಮಾಜಿ ಸೈನಿಕರು, ಎಬಿವಿಪಿ ಕಾರ್ಯಕರ್ತರು ಬೃಹತ್ ತಿರಂಗಾ ಯಾತ್ರೆ ನಡೆಸಿದರು.
ಇಲ್ಲಿನ ಸೋಮೇಶ್ವರ ದೇವಸ್ಥಾನದಿಂದ ಆರಂಭವಾದ ಯಾತ್ರೆಯು ಆದಯ್ಯ ಸರ್ಕಲ್, ಗದಗ ನಾಕಾ, ಹೊಸ ಬಸ್ ನಿಲ್ದಾಣ, ಶಿಗ್ಲಿ ಕ್ರಾಸ್, ಪುರಸಭೆ, ಸೋಮೇಶ್ವರ ಪಾದಗಟ್ಟಿ, ಪರ್ವತಮಲ್ಲಯ್ಯನ ದೇವಸ್ಥಾನ, ವಿದ್ಯಾರಣ್ಯ ಸರ್ಕಲ್, ಬಸ್ತಿಬಣ ಮೂಲಕ ಸಂಚರಿಸಿ ಮಹಾಕವಿ ಪಂಪ ವರ್ತುಲಕ್ಕೆ ಆಗಮಿಸಿತು. `ದೇಶ ಸಂರಕ್ಷಣೆಗಾಗಿ ನಮ್ಮೆಲ್ಲರ ನಡೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಮಾಜಿ ಸೈನಿಕರು, ಯುವಕರು, ವಿದ್ಯಾರ್ಥಿಗಳು ನೂರು ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹಿಡಿದುಕೊಡು ಯೋಧರಿಗೆ ಜಯಘೋಷ ಕೂಗಿದರು.
ಶಾಸಕ ಡಾ. ಚಂದ್ರು ಲಮಾಣಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಭಾರತೀಯ ಯೋಧರು ಪಾಕಿಸ್ತಾನದೊಳಗೆ ನುಗ್ಗಿ ಉಗ್ರರನ್ನು ಸದೆಬಡಿದಿದ್ದಾರೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಿಂದ ನಡೆದ ಹತ್ಯೆಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರದ ಮೂಲಕ ಉಗ್ರರ ಹುಟ್ಟಡಗಿಸುವದರೊಂದಿಗೆ ಮಹಿಳೆಯರು, ಮಕ್ಕಳು ಸೇರಿ ಪ್ರತಿಯೊಬ್ಬ ಭಾರತೀಯರಲ್ಲಿ ಆತ್ಮಸ್ಥೈರ್ಯ, ನೆಮ್ಮದಿ, ರಕ್ಷಣೆಯ ಭಾವನೆ ಮೂಡಿಸಿದ ಕೇಂದ್ರ ಸರ್ಕಾರ ಮತ್ತು ಭಾರತದ ಸೈನಿಕರ ದಿಟ್ಟ ನಿರ್ಧಾರ ಅಭಿನಂದನೀಯ ಎಂದರು.
ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಹಾಗೂ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಹಿರೇಮಠ, ಸುನೀಲ ಮಹಾಂತಶೆಟ್ಟರ ಮಾತನಾಡಿದರು. ಈ ಸಂದರ್ಭದಲ್ಲಿ ನಿಂಗಪ್ಪ ಬನ್ನಿ, ಗಂಗಾಧರ ಮೆಣಸಿನಕಾಯಿ, ಮಾರುತಿ ಬಟ್ಟೂರ, ಮಹಾದೇವಪ್ಪ ಅಣ್ಣಿಗೇರಿ, ಬಸಣ್ಣ ಹಂಜಿ, ಅನಿಲ ಮುಳಗುಂದ, ಬಸವರಾಜ ಕಲ್ಲೂರ, ಮುದಕಣ್ಣ ಗಾಡದ, ಬಸವರಾಜ ಚಕ್ರಸಾಲಿ, ಪರಶುರಾಮ ಇಮ್ಮಡಿ, ಜಗದೀಶಗೌಡ ಪಾಟೀಲ, ಕರೆಣ್ಣವರ, ಜಾನು ಲಮಾಣಿ, ಶಕ್ತಿ ಕತ್ತಿ, ಕಲ್ಲಪ್ಪ ಹಡಪದ ಸೇರಿದಂತೆ ಮತ್ತಿತರರು ಇದ್ದರು.
ನಮ್ಮ ಯೋಧರ ಶೌರ್ಯ, ಸಾಹಸವನ್ನು ಮೆಚ್ಚಿ ಅವರಲ್ಲಿ ನೈತಿಕ ಸ್ಥೈರ್ಯ ತುಂಬುವುದು ಎಲ್ಲ ಭಾರತೀಯರ ಕರ್ತವ್ಯ. ಆದರೆ ದೇಶದೊಳಗಿನ ಕೆಲ ದುಷ್ಟರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿರುವುದು ಖಂಡನೀಯ. ಮೊದಲು ನಮ್ಮ ದೇಶದ ಬಗ್ಗೆ ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು. ದೇಶ ಉಳಿದರೆ ಮಾತ್ರ ನಾವು ಬದುಕಿರಲು ಸಾಧ್ಯ ಎಂಬುದನ್ನು ನಾವು ಅರಿತುಕೊಳ್ಳಬೇಕು. ಯಾರೂ ಸೈನಿಕರ ಧೈರ್ಯವನ್ನು ಕುಗ್ಗಿಸುವ ಸಾಹಸ ಮಾಡಬಾರದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.