ಧಾರವಾಡ: ಉದ್ಯೋಗಾಕಾಂಕ್ಷಿಗಳ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ವಿಪಕ್ಷ ಉಪನಾಯಕ ಮತ್ತು ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಪ್ರಧಾನಿ ಮೋದಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ರಾಜ್ಯದಲ್ಲಿ ಓದುತ್ತಿರುವ ಉದ್ಯೋಗಾಕಾಂಕ್ಷಿಗಳ ನೋವನ್ನು ಗಮನಕ್ಕೆ ತರಲಾಗಿದೆ ಮತ್ತು ಸರ್ಕಾರವು ಉದ್ಯೋಗ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ವಿವರಿಸಲಾಗಿದೆ. ರಾಜ್ಯದ ಅನೇಕ ಯುವಕರು ಹತಾಶೆಯಿಂದ ಬೀದಿಗೆ ತೆರಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಧಾರವಾಡದಲ್ಲಿ ನಡೆದ ಪ್ರತಿಭಟನೆಯಲ್ಲಿ ಯುವಕರಲ್ಲಿ ಕೋಪ ಮತ್ತು ಅಸಹನೆ ಸ್ಪಷ್ಟವಾಗಿದೆ. “ನಾವು ಉದ್ಯೋಗಾಕಾಂಕ್ಷಿಗಳ ಬೇಡಿಕೆಗಾಗಿ ಅವರ ಜೊತೆಗೆ ನಿಂತು ಬೆಂಬಲಿಸಿದ್ದೇವೆ.
ರಾಜ್ಯ ಸರ್ಕಾರ ಸಮರ್ಪಕ ಉತ್ತರ ನೀಡದೆ ಯುವಕರ ಮೇಲೆ ಲಾಠಿಚಾರ್ಜ್ ಮಾಡಿದೆ. ಯುವಕರ ಪರಿಶ್ರಮಕ್ಕೆ ಫಲ ಸಿಗಬೇಕು, ಅವರ ಅನ್ಯಾಯವನ್ನು ನೋಡುತ್ತಾ ನಾವು ಸುಮ್ಮನಿರಲ್ಲ” ಎಂದು ಅವರು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಈ ಪತ್ರದ ಬಳಿಕ, ರಾಜ್ಯ ಸರ್ಕಾರವು 56,432 ಹುದ್ದೆಗಳ ಭರ್ತಿ ಅಧಿಸೂಚನೆ ಹೊರಡಿಸುವ ತೀರ್ಮಾನ ಕೈಗೊಂಡಿದೆ.



