ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ ತಂಡದ ಸೋಲು ಮುಂದುವರೆದ ಹಿನ್ನೆಲೆ, ಪಾಕ್ ತಂಡದ ಪ್ರದರ್ಶನದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಮಾಜಿ ಕ್ರಿಕೆಟಿಗರಾದ ಬಾಸಿತ್ ಅಲಿ, ಶಾಹಿದ್ ಅಫ್ರಿದಿ ಮತ್ತು ಮೊಹಮ್ಮದ್ ಯೂಸುಫ್ ಸೇರಿದಂತೆ ಹಲವರು ಹಿರಿಯ ಆಟಗಾರರನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳಿಗೆ ಇದೀಗ ಪಾಕಿಸ್ತಾನ್ ಆಲ್‌ರೌಂಡರ್ ಶಾದಾಬ್ ಖಾನ್ ತಿರುಗೇಟು ನೀಡಿದ್ದಾರೆ.
ನಮೀಬಿಯಾ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾದಾಬ್ ಖಾನ್, “ನೀವು ಶ್ರೇಷ್ಠ ಆಟಗಾರರಾಗಿರಬಹುದು. ಆದರೆ ನಿಮ್ಮ ಕಾಲದಲ್ಲಿ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ ಎಂಬುದು ನೆನಪಿರಲಿ. ನಾವು ಭಾರತ ತಂಡವನ್ನು ಸೋಲಿಸಿದ್ದೇವೆ. ಈ ವಿಷಯವೂ ಗಮನದಲ್ಲಿರಬೇಕು,” ಎಂದು ಹೇಳಿದ್ದಾರೆ.
2021ರ ICC Men’s T20 World Cup ಟೂರ್ನಿಯಲ್ಲಿ ಪಾಕಿಸ್ತಾನ್ ತಂಡವು ಭಾರತದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸಿಕ್ಕ ಏಕೈಕ ಜಯವೂ ಇದಾಗಿದೆ. ಆ ಪಂದ್ಯದಲ್ಲಿ ಶಾದಾಬ್ ಖಾನ್ ಕೂಡ ತಂಡದ ಭಾಗವಾಗಿದ್ದರು. ಈ ಹಿನ್ನೆಲೆಯಲ್ಲೇ ಟೀಕಿಸಿದ ಮಾಜಿ ಆಟಗಾರರಿಗೆ ಶಾದಾಬ್ ಖಾನ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.



