ದೇವನಹಳ್ಳಿ: ಎತ್ತಿನಹೊಳೆ ಯೋಜನೆಯಡಿ ಲಕ್ಕೆನಹಳ್ಳಿ ಬಳಿ ಡ್ಯಾಂ ನಿರ್ಮಾಣ ಮಾಡುವ ಸರ್ಕಾರದ ಚಿಂತನೆಗೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಡ್ಯಾಂ ನಿರ್ಮಾಣದ ಪರಿಣಾಮ 7 ಹಳ್ಳಿಗಳೆಲ್ಲ ಮುಳುಗಡೆಯಾಗುವ ಭೀತಿಯ ನಡುವೆ, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಸರ್ಕಾರ ವಿಸ್ತೃತ ಯೋಜನಾ ವರದಿಯ ಪ್ರಕಾರ,
ಲಕ್ಕೆನಹಳ್ಳಿ ಸೇರಿದಂತೆ ಸಿಂಗೇನಹಳ್ಳಿ, ದಾಸರಪಾಳ್ಯ, ಶ್ರೀರಾಮನಹಳ್ಳಿ, ಮಚ್ಚೇನಹಳ್ಳಿ, ಕಡೆಪಾಳ್ಯ ಹಾಗೂ ಗಾಣದಾಳು ಗ್ರಾಮಗಳನ್ನು ಸ್ಥಳಾಂತರಿಸಿ ಡ್ಯಾಂ ನಿರ್ಮಿಸಲು ಯೋಜನೆ ರೂಪಿಸಿದೆ. ಈ ಯೋಜನೆಯಡಿ ಎತ್ತಿನಹೊಳೆ ನೀರನ್ನು ಪೈಪ್ ಲೈನ್ ಮೂಲಕ ಲಕ್ಕೆನಹಳ್ಳಿಗೆ ತರಲಾಗುತ್ತದೆ. ನಂತರ, ಅಲ್ಲಿಯ ಡ್ಯಾಂ ತುಂಬಿಸಿ ಉಳಿದ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ಸರ್ಕಾರ ಉದ್ದೇಶಿಸಿದೆ.
ಆದರೆ ಈ ಡ್ಯಾಂ ನಿರ್ಮಾಣದಿಂದ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿ ಮುಳುಗಡೆಯಾಗಲಿದೆ ಎಂಬ ಆತಂಕ ಸ್ಥಳೀಯ ರೈತರಲ್ಲಿ ಮನೆ ಮಾಡಿದೆ. ಅಡಿಕೆ ಸೇರಿದಂತೆ ಹಲವಾರು ಬೆಳೆಯುತ್ತಿರುವ ಈ ಪ್ರದೇಶದ ಭೂಮಿ ಮರೆಯಾದರೆ, ಜೀವನಾಧಾರವೇ ನಾಶವಾಗುತ್ತದೆ ಎಂದು ಗ್ರಾಮಸ್ಥರು ಭಾವಿಸುತ್ತಿದ್ದಾರೆ.
ಕಳೆದ ವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಡ್ಯಾಂ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿದರೂ, ಗ್ರಾಮಸ್ಥರ ಅಭಿಪ್ರಾಯವೇ ಕೇಳದೇ ಹಿಂತಿರುಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸಿದ ಗ್ರಾಮಸ್ಥರು, “ನಮ್ಮ ಹಳ್ಳಿಗಳಿಗೆ ಹಾನಿ ಆಗುವಂತ ಡ್ಯಾಂ ಇಲ್ಲ ಬೇಡ, ಬೇರೆ ಬಯಲು ಪ್ರದೇಶದಲ್ಲಿ ಡ್ಯಾಂ ನಿರ್ಮಿಸಲಿ ಎಂಬುದಾಗಿ ಒತ್ತಾಯಿಸಿದ್ದಾರೆ.