ಮಡಿಕೇರಿ ;- ನಮ್ಮಲ್ಲಿರುವುದು, ಕಾಂಗ್ರೆಸ್ ಬಣವಷ್ಟೇ ಎಂದು ಸಚಿವ ಬೋಸರಾಜು ಹೇಳಿದ್ದಾರೆ. ನಾನು ಸಿದ್ದರಾಮಯ್ಯನವರ ಬಣ ಎಂಬ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಇರುವಂತಹ ಶಿಸ್ತೇ ಅಂತಿಮ. ಹೈಕಮಾಂಡ್ ಹೇಳಿದಂತೆ ಎಲ್ಲರೂ ನಡೆದುಕೊಳ್ಳುತ್ತಾರೆ ಅಷ್ಟೇ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್‌ಗೆ ತಿರುಗೇಟು ನೀಡಿದರು.
ಇದರಲ್ಲಿ ಮುಂದು ಹಿಂದು ಎನ್ನುವ ವ್ಯತ್ಯಾಸವಿಲ್ಲ. ಕಾಂಗ್ರೆಸ್ ಅಧಿನಾಯಕರು ಏನು ಹೇಳುತ್ತಾರೆ ಅದರಂತೆ ಎಲ್ಲರೂ ನಡೆದುಕೊಳ್ಳುತ್ತಾರೆ. ಬೇರೆ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ವಿಚಾರ ಅದೆಲ್ಲವೂ ವಿರೋಧ ಪಕ್ಷದವರ ಸೃಷ್ಟಿ ಅಷ್ಟೇ. ನಮ್ಮ ಸರ್ಕಾರ ಸುಭದ್ರವಾಗಿದೆ. ಎಲ್ಲಾ ಯೋಜನೆಗಳು ಸುಸೂತ್ರವಾಗಿ ಜಾರಿಯಾಗುತ್ತಿವೆ. ಆದರೆ ರಾಜಕೀಯವಾಗಿ ಉಪದ್ರವ ನೀಡುವ ಕೆಲಸಗಳು ಆಗುತ್ತಲೇ ಇರುತ್ತವೆ ಎಂದರು. ಬಿಜೆಪಿ, ಜೆಡಿಎಸ್‌ನವರ ಕುತಂತ್ರಗಳಿಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಹೇಳಿದರು.



