ಬೆಂಗಳೂರು:- ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡೋದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಇದೆಲ್ಲ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನಮಗೆ ಗೊತ್ತೇ ಆಗೋದಿಲ್ಲ. ಕೆಲವರು ಅವರವರ ಅಭಿಪ್ರಾಯ ಹೇಳ್ತಾರೆ. ಎರಡೂವರೆ ವರ್ಷಕ್ಕೆ ಸಂಪುಟ ಪುನಾರಚನೆ ಆಗಬೇಕು ಅಂತ ಹೇಳ್ಕೊಂಡು ಬರ್ತಿದ್ದಾರಲ್ಲ ಇದರ ಬಗ್ಗೆ ನಮಗ್ಯಾರಿಗೂ ಗೊತ್ತೇ ಇಲ್ಲ. ಹೈಕಮಾಂಡ್‌ನವರು ಯಾರೂ ಹೇಳಿಲ್ಲ, ಅಥವಾ ಸಿಎಂ ಆಗಲೀ ಅಧ್ಯಕ್ಷರಾಗಲೀ ನಮಗೆ ಇದರ ಬಗ್ಗೆ ಹೇಳಿಲ್ಲ. ಒಳಗೆ ಅವರು ಏನು ಅಂಡರ್‌ಸ್ಟ್ಯಾಂಡಿಂಗ್‌ಗೆ ಬಂದಿದ್ದಾರೋ ಗೊತ್ತಿಲ್ಲ ಎಂದರು.
ಸಾಮಾಜಿಕ ಆರ್ಥಿಕ ಸಮೀಕ್ಷೆ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಮಾತಾಡಿದ ಪರಮೇಶ್ವರ್, ಜಾತಿ ಸಮೀಕ್ಷೆ ಬಗ್ಗೆ ಗೊಂದಲದ ಹೇಳಿಕೆ ಕೊಡಬೇಡಿ ಎಂದು ಮನವಿ ಮಾಡಿಕೊಂಡರು. ಸಾಮಾಜಿಕ ಆರ್ಥಿಕ ಸಮೀಕ್ಷೆ ಮೂಲಕ ಸಮುದಾಯಗಳ ಸ್ಥಿತಿಗತಿ ಗೊತ್ತಾಗುತ್ತದೆ. ಇದರ ಹೊರತಾಗಿ ಈ ಸಮೀಕ್ಷೆಯಿಂದ ಇನ್ನೇನು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯ? ಕೇಂದ್ರದಿಂದಲೂ ಮುಂದೆ ಗಣತಿ ಮಾಡ್ತಾರೆ. ಆಗ ಯಾರಾದರೂ ನಾವು ಗಣತಿಯಲ್ಲಿ ಭಾಗವಹಿಸಲ್ಲ ಅಂತ ಹೇಳಿದರೆ ಗೊಂದಲ ಆಗಲ್ವಾ? ಬಿಜೆಪಿ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.