ನವದೆಹಲಿ: ನಾವು ಪಾಕ್ʼನ ನಾಗರೀಕರನ್ನು ಟಾರ್ಗೆಟ್ ಮಾಡಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ದೆಹಲಿಯಿಂದಲೇ ವರ್ಚುವಲ್ ಆಗಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ ರಾಜನಾಥ್ ಸಿಂಗ್ ಬಳಿಕ ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರು, ಭಾರತದ ನಿಲುವುಗಳೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.
“ಭಾರತೀಯ ಸೇನೆಯು ಶೌರ್ಯ, ಧೈರ್ಯ ಹಾಗೂ ಸಂಯಮವನ್ನು ಪ್ರದರ್ಶಿಸಿದೆ ಮತ್ತು ಪಾಕಿಸ್ತಾನದ ಅನೇಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಸೂಕ್ತ ಉತ್ತರ ನೀಡಿದೆ. ನಾವು ಗಡಿಯ ಸಮೀಪವಿರುವ ಸೇನಾ ನೆಲೆಗಳ ವಿರುದ್ಧ ಕ್ರಮ ಕೈಗೊಂಡಿದ್ದಲ್ಲದೆ, ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿಯಲ್ಲಿಯೂ ಸಹ ಭಾರತೀಯ ಪಡೆಗಳ ಗುಂಡಿನ ಶಬ್ದ ಕೇಳಿಬಂದಿದೆ” ಎಂದು ಹೇಳಿದರು.
26 ನಾಗರಿಕರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ದಾಳಿಯ ಹಿಂದೆ ಇದ್ದ ಭಾರತ ವಿರೋಧಿ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಭಾರತೀಯ ಸೇನೆಯು ಈ ಮೂಲಕ ತಕ್ಕ ನ್ಯಾಯ ಒದಗಿಸಿದೆ ಎಂದು ರಕ್ಷಣಾ ಸಚಿವರು ಹೇಳಿದರು.
“ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕೇವಲ ಮಿಲಿಟರಿ ಕಾರ್ಯಾಚರಣೆಯಾಗಿರಲಿಲ್ಲ, ಬದಲಾಗಿ ಭಾರತದ ರಾಜಕೀಯ, ಸಾಮಾಜಿಕ ಮತ್ತು ಕಾರ್ಯತಂತ್ರದ ಇಚ್ಛಾಶಕ್ತಿಯ ಸಂಕೇತವಾಗಿತ್ತು.
ಈ ಕಾರ್ಯಾಚರಣೆಯು ಭಯೋತ್ಪಾದನೆಯ ವಿರುದ್ಧ ಭಾರತದ ಬಲವಾದ ಇಚ್ಛಾಶಕ್ತಿ ಮತ್ತು ಮಿಲಿಟರಿ ಶಕ್ತಿಯ ಸಾಮರ್ಥ್ಯ ಮತ್ತು ದೃಢಸಂಕಲ್ಪದ ಪ್ರದರ್ಶನವಾಗಿದೆ.” ಎಂದು ಹೇಳಿದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಯಾವುದೇ ನಾಗರಿಕರನ್ನು ಭಾರತೀಯ ಸೇನೆ ಗುರಿಯಾಗಿಸಿಕೊಂಡಿಲ್ಲ ಎಂಬ ಸರ್ಕಾರದ ನಿಲುವನ್ನು ರಾಜನಾಥ್ ಸಿಂಗ್ ಮತ್ತೆ ಹೇಳಿದರು.