ಬೆಂಗಳೂರು: ಹುಟ್ಟಿನಿಂದ ಯಾರೂ ಮೇಧಾವಿಗಳಲ್ಲ. ಅವಕಾಶ ಸಿಕ್ಕರೆ ಎಲ್ಲರೂ ಮೇಧಾವಿಗಳಾಗ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಕಾಳಿದಾಸ ಹೆಲ್ತ್ ಆಂಡ್ ಎಜುಕೇಷನ್ ಟ್ರಸ್ಟ್ ಮತ್ತು ಅಹಿಲ್ಯಾ ಫೌಂಡೇಷನ್ ಹಮ್ಮಿಕೊಂಡಿದ್ದ “ಪ್ರೇರಣಾ ಸಮಾರಂಭ” ವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಅವಕಾಶ ಸಿಕ್ಕರೆ, ಶಿಕ್ಷಣದ ಅನುಕೂಲಗಳು ಸಿಕ್ಕರೆ ಎಲ್ಲರ ಪ್ರತಿಭೆಗಳೂ ಹೊರಗೆ ಬರುತ್ತದೆ. ಆದ್ದರಿಂದ ಸ್ವಾಭಿಮಾನಿಗಳಾಗಿ, ಉತ್ತಮ ಪ್ರಜೆಗಳಾಗಿ ಬಾಳಲು ಶಿಕ್ಷಣ ಅತ್ಯಂತ ಅಗತ್ಯ. ಎಲ್ಲರೂ ಶಿಕ್ಷಣ ಪಡೆಯಿರಿ. ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ಪಡೆಯಲು ಸಹಕರಿಸಿ ಎಂದು ಕರೆ ನೀಡಿದರು.
ನಮಗೆ ಸಹಕರಿಸಿದ ಸಮಾಜದ ಪರವಾಗಿ ನಾವುಗಳು ಶ್ರಮಿಸಬೇಕು. ಶ್ರಮ ಮತ್ತು ಗುರಿ ಇಲ್ಲದೇ ಹೋದರೆ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು. ಬ್ರಿಟೀಷರು ಬರುವ ಮೊದಲು ಶೂದ್ರ ಸಮುದಾಯಗಳಿಗೆ ಶಿಕ್ಷಣ, ವಿದ್ಯೆ ನಿಷೇಧಿಸಲಾಗಿತ್ತು.
ಮುಂದುವರೆದ ಜಾತಿಗಳ ಹೆಣ್ಣುಮಕ್ಕಳಿಗೂ ಮೊದಲು ವಿದ್ಯೆ ಕೊಡುವಂತಿರಲಿಲ್ಲ. ಅಂಬೇಡ್ಕರ್ ಅವರು ಶೂದ್ರ ಸಮುದಾಯ ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕು ನೀಡಿದರು. ಈ ಚರಿತ್ರೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.