ಬೆಂಗಳೂರು:- ಸರ್ಕಾರದ ಬ್ಯಾಲೆಟ್ ಪೇಪರ್ ಚುನಾವಣಾ ನಿರ್ಧಾರಕ್ಕೆ ಶಾಸಕ ಅಶ್ವಥ್ ನಾರಾಯಣ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ದುರುದ್ದೇಶ ಇಟ್ಟುಕೊಂಡಿದ್ದಾರೆ. ಜನರ ಕೋಪ ಮುಗಿಲಿಗೇರಿದೆ. ಈ ಆಕ್ರೋಶವನ್ನು ಚುನಾವಣೆಯಲ್ಲಿ ತೋರಿಸುತ್ತಾರೆ ಎಂಬ ಭಯ ಇದೆ. ಹಾಗಾಗಿ ಬ್ಯಾಲೆಟ್ ಪೇಪರ್‌ಗೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಂತ್ರಜ್ಞಾನದ ಜಗತ್ತಿನಲ್ಲಿ ಯಾರಾದರೂ ಮತ್ತೆ ಹಿಂದಕ್ಕೆ ಹೋಗ್ತಾರಾ? ಇವರು ಮಾಡುವಂತಹ ಕ್ರಮ ರಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವಂತದ್ದು. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಸಾಧ್ಯವಿಲ್ಲ ಎಂದು ಈ ಹಿಂದೆ ಕಾಂಗ್ರೆಸ್ ಅರ್ಥ ಮಾಡಿಕೊಂಡಿತ್ತು. ಅಧಿಕಾರ ಹಾಗೂ ಗೂಂಡಾಗಿರಿ ಮಾಡಬೇಕು. ಅಧಿಕಾರಗಳ ವ್ಯವಸ್ಥೆ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲಬೇಕೆಂದು ಈ ನಿಯಮ ತರುತ್ತಿದ್ದಾರೆ. ಇದು ಪ್ರಗತಿಪರವಾದ ನಿರ್ಣಯವಲ್ಲ ಎಂದು ಕಿಡಿಕಾರಿದ್ದಾರೆ.
ಇದು ಕಳಪೆ, ಕೀಳುಮಟ್ಟದ ಯೋಚನೆ. ಈ ಕ್ರಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದರು.