ಬಾಲಿವುಡ್ ದಿಗ್ಗಜ ಧರ್ಮೇಂದ್ರ ನವೆಂಬರ್ 24ರಂದು ನಿಧನರಾಗುವ ಮುನ್ನ, ಅವರ ಕುಟುಂಬ ಭಾರೀ ಮಾನಸಿಕ ಒತ್ತಡ ಮತ್ತು ಮಾಧ್ಯಮ ಕಿರುಕುಳವನ್ನು ಎದುರಿಸಿತ್ತು ಎಂಬ ವಿಚಾರ ಈಗ ಹೊರಬಂದಿದೆ. ಧರ್ಮೇಂದ್ರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದಾಗ, ಆಸ್ಪತ್ರೆ ಹೊರಗೆ ಪಾಪರಾಜಿಗಳು ನಿರಂತರವಾಗಿ ಜಮಾಯಿಸಿದ್ದರಿಂದ ಡಿಯೋಲ್ ಕುಟುಂಬ ಅಸಹಾಯ ಸ್ಥಿತಿಗೆ ತಲುಪಿತ್ತು.
ಆಸ್ಪತ್ರೆ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ, ಧರ್ಮೇಂದ್ರ ಅವರ ಚಿಕಿತ್ಸೆಯನ್ನು ಮನೆಯಲ್ಲಿಯೇ ಮುಂದುವರಿಸಲು ಕುಟುಂಬ ನಿರ್ಧರಿಸಿತು. ಆದರೆ ಅವರನ್ನು ಮನೆಗೆ ಕರೆತಂದ ಬಳಿಕವೂ ಪಾಪರಾಜಿಗಳು ಮನೆಯ ಹೊರಗೆ ನಿಂತು ಕುಟುಂಬದ ಚಲನವಲನಗಳನ್ನೆಲ್ಲ ಸೆರೆಹಿಡಿಯುತ್ತಿದ್ದರು ಎಂದು ಹೇಮಾ ಮಾಲಿನಿ ಆರೋಪಿಸಿದ್ದಾರೆ.
ಈ ನಿರಂತರ ಕಿರುಕುಳ ಸನ್ನಿ ಡಿಯೋಲ್‌ಗೆ ತೀವ್ರ ಆಕ್ರೋಶ ತರಿಸಿತ್ತು. ಭಾವನಾತ್ಮಕ ಒತ್ತಡದಲ್ಲಿದ್ದ ಸನ್ನಿ ಡಿಯೋಲ್, ಪಾಪರಾಜಿಗಳ ಮೇಲೆ ಕೋಪ ಹೊರಹಾಕಿದ್ದು ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿದ ಹೇಮಾ ಮಾಲಿನಿ, “ಆ ಸಮಯದಲ್ಲಿ ನಾವು ಎಲ್ಲರೂ ತುಂಬಾ ನೋವಿನ ಹಂತದಲ್ಲಿದ್ದೆವು. ಆದರೂ ಮಾಧ್ಯಮಗಳು ನಮ್ಮನ್ನು ಹಾಗೂ ನಮ್ಮ ಕಾರುಗಳನ್ನು ಹಿಂಬಾಲಿಸುತ್ತಿದ್ದವು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಧರ್ಮೇಂದ್ರ ಅವರ ನಿಧನ ಎಲ್ಲರಿಗೂ ದೊಡ್ಡ ಆಘಾತ. ಕಳೆದ ಒಂದು ತಿಂಗಳಿನಿಂದ ನಾವು ನಿರಂತರವಾಗಿ ಆಸ್ಪತ್ರೆ ಮತ್ತು ಮನೆ ನಡುವೆ ಓಡಾಡುತ್ತಿದ್ದೆವು. ಅವರು ಈ ಹಿಂದೆಯೂ ಹಲವು ಬಾರಿ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರು. ಈ ಬಾರಿಯೂ ಅವರು ಬದುಕುತ್ತಾರೆ ಎಂಬ ನಿರೀಕ್ಷೆಯಿತ್ತು” ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
ಧರ್ಮೇಂದ್ರ ಅವರ ಅಂತಿಮ ದಿನಗಳಲ್ಲಿ ಕುಟುಂಬ ಎದುರಿಸಿದ ಈ ಅನುಭವ ಇದೀಗ ಬಾಲಿವುಡ್‌ನಲ್ಲಿ ಮಾಧ್ಯಮ ನೈತಿಕತೆ ಕುರಿತ ಚರ್ಚೆಗೆ ಕಾರಣವಾಗಿದೆ.



