ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ, ಗೊಜನೂರು, ಮಾಡಳ್ಳಿ, ಯತ್ತಿನಹಳ್ಳಿ ಹಾಗೂ ಯಳವತ್ತಿ ಗ್ರಾಮಗಳ ರೈತರ ಹೊಲಗಳಿಗೆ ಅಪರ ಜಿಲ್ಲಾಧಿಕಾರಿ ದುರಗೇಶ ಕೆ ಸೋಮವಾರ ಭೇಟಿ ನೀಡಿ ಹೆಸರು, ಮೆಣಸಿನಕಾಯಿ, ಶೇಂಗಾ, ಮೆಕ್ಕೆಜೋಳ ಬೆಳೆ ಹಾನಿ ಪರಿಶೀಲನೆ ಮಾಡಿದರು.
ರೈತರೊಂದಿಗೆ ಮಾಹಿತಿ ಪಡೆದ ಅಪರ ಜಿಲ್ಲಾಧಿಕಾರಿಗಳು, ರೈತರ ಜಮೀನಿನಲ್ಲಿ ನೀರು ನಿಂತ ಪ್ರದೇಶಗಳನ್ನು ವೀಕ್ಷಿಸಿದರು. ಮಳೆಯಿಂದ ಹಾಳಾದ ಬೆಳೆ, ಯಂತ್ರಗಳ ಸಹಾಯದಿಂದ ಬೆಳೆ ಕಟಾವು ಮಾಡುತ್ತಿರುವುದನ್ನು ವೀಕ್ಷಿಸಿ, ಒಕ್ಕಲಿಯಾದ ಹೆಸರು ಕಾಳಿನ ಗುಣಮಟ್ಟ ಪರಿಶೀಲಿಸಿದರು.
ಸತತ ಮಳೆಯಿಂದ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಸೇರಿ ಬಹುತೇಕ ಬೆಳೆಗಳು ಹಾಳಾಗಿವೆ. ಹೆಸರು ಕಾಳು ಕಪ್ಪಾಗಿವೆ, ಜೊಳ್ಳು ಕಾಳು, ಬೂಸ್ಟ್ ಬಂದಿದ್ದು, ಬೆಲೆಯೂ ಸಂಪೂರ್ಣ ಕುಸಿತವಾಗಿದ್ದು, ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಹಿಂಗಾರಿಗೆ ಮತ್ತೆ ಭೂಮಿ ಹದಗೊಳಿಸಬೇಕು, ಬದುಕು ಸಾಗಿಸುವುದು ಹೇಗೆಂಬ ಚಿಂತೆಯಲ್ಲಿ ರೈತರಿದ್ದೇವೆ. ಅರ್ಥಿಕ ಮುಗ್ಗಟ್ಟಿನಿಂದ ಬೆಳೆವಿಮೆಯನ್ನೂ ಪಾವತಿಸಿಲ್ಲ. ಸಂಕಷ್ಟದ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ರೈತರಿಗೆ ಬೆಳೆವಿಮೆ, ಬೆಳೆಹಾನಿ ಪರಿಹಾರ ಕಲ್ಪಿಸಿ ಹಿತ ಕಾಪಾಡುವ ಕೆಲಸ ಮಾಡಿ ಎಂದು ರೈತರು ಮನವಿ ಮಾಡಿದರು.
ಈ ವೇಳೆ ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಕಂದಾಯ ಅಧಿಕಾರಿ ಎಂ.ಎ. ನದಾಫ್, ಕೃಷಿ ಅಧಿಕಾರಿಗಳಾದ ಚಂದ್ರಶೇಖರ ನರಸಮ್ಮನವರ, ಪಿ.ಕೆ. ಹೊನ್ನಪ್ಪನವರ, ಗ್ರಾಮ ಲೆಕ್ಕಾಧಿಕಾರಿಗಳಾದ ನಾಗರಾಜ ಚೋಳಮ್ಮನವರ, ಎನ್.ಎ. ಪಠಾಣ, ಗ್ರಾ.ಪಂ ಅಧ್ಯಕ್ಷ ಮಂಜುನಾಥ ಚಲುವಾದಿ, ಉಪಾಧ್ಯಕ್ಷ ಮಹಾಂತಗೌಡ ಪಾಟೀಲ, ಗಂಗಾಧರ ಕಳಿಂಗನವರ, ರೈತರಾದ ರಾಜಕುಮಾರ ಕಿತ್ತಲಿ, ಮಹಾಂತಪ್ಪ ಸೊರಟೂರ, ರಾಜಣ್ಣ ರಾಯಚೂರ, ಚಂದ್ರಗೌಡ ದೊಡ್ಡಗೌಡ್ರ, ಸೋಮನಗೌಡ್ರ ಭಾಗವಾಡ, ಬಸನಗೌಡ ದೊಡ್ಡಗೌಡ್ರ, ಗ್ರಾಮ ಸಹಾಯಕ ಪರಪ್ಪ ಸಂಶಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಮುಖಂಡರು, ರೈತರು ಸೇರಿ ತಮ್ಮ ಗ್ರಾಮದಲ್ಲಿ ಆಗಿರುವ ಮಳೆಯ ಪ್ರಮಾಣ, ಹಾನಿ ಇತ್ಯಾದಿಗಳನ್ನು ವಿವರಿಸಿದರು.
ಹಾನಿಗೊಳಗಾದ ಬಹುತೇಕ ಹಳ್ಳಿಗಳಿಗೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳ ತಂಡ ಪ್ರತಿ ಗ್ರಾಮದಲ್ಲಿ ಸುಮಾರು 10ಕ್ಕೂ ಅಧಿಕ ಜಮೀನುಗಳಿಗೆ ಹಾಗೂ ರೈತರು ಒಕ್ಕಲಿ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ಹೆಸರು ಕಾಳು ಹಾಳಾಗಿರುವದನ್ನು ವೀಕ್ಷಿಸಿ ರೈತರ ನೋವಿಗೆ ಸ್ಪಂದಿಸಿದರು.
ಅಪರ ಜಿಲ್ಲಾಧಿಕಾರಿ ದುರುಗೇಶ ಕೆ ರೈತರೊಂದಿಗೆ ಮಾತನಾಡಿ, ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದೇವೆ. ಅತಿಯಾದ ಮಳೆಯಿಂದ ಗದಗ ಜಿಲ್ಲೆಯಾದ್ಯಂತ ಮುಂಗಾರಿನ ಬೆಳೆಗಳು ಹಾನಿಗೀಡಾಗಿವೆ. ರೈತರು ನಷ್ಟಕ್ಕೊಳಗಾಗಿದ್ದಾರೆ. ಈ ಬಗ್ಗೆ ಕೃಷಿ, ಕಂದಾಯ, ತೋಟಗಾರಿಕೆ ಸೇರಿ ಇಲಾಖೆಯಿಂದ ಜಂಟಿ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ವಸ್ತುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲಾಗುವದು. ರೈತರಿಗೆ ಬೆಳೆಹಾನಿ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.


