ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳು ನಿರಂತರ 24/7 ಕಾರ್ಯನಿರ್ವಹಿಸಲು ಸರ್ಕಾರದ ಚಿಂತನೆ ನಡೆಸಿದೆ. ಜೊತೆಗೆ ಗುಣಮಟ್ಟದ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸರ್ಕಾರದ ಆದ್ಯತೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಹೇಳಿದರು.
ತಾಲೂಕ ಆಸ್ಪತ್ರೆ (ನೂತನ ಸ್ಥಳದ ಆವರಣ) ವರವಿ ರಸ್ತೆ, ಶಿರಹಟ್ಟಿಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಘಟಕ, ತಾಲೂಕಾ ಆರೋಗ್ಯಾಧಿಕಾರಿಗಳು ಶಿರಹಟ್ಟಿ, ನಬಾರ್ಡ್ ಯೋಜನೆಯಡಿಯಲ್ಲಿ 100 ಹಾಸಿಗೆಗಳ ತಾಲೂಕು ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ಸಮಾರಂಭ ಹಾಗೂ ಮುಂಡರಗಿ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಬಿ.ಪಿ.ಎಚ್.ಯು ಲ್ಯಾಬ್ ಹಾಗೂ ಲಕ್ಷ್ಮೇಶ್ವರ ತಾಲೂಕು ಬಾಲೇಹೊಸೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿಗಳ ವಸತಿ ಗೃಹ ಉದ್ಘಾಟನಾ ಸಮಾರಂಭ, ಗೃಹ ಆರೋಗ್ಯ ಯೋಜನೆಗೆ ಚಾಲನೆ, ಆಶಾ ಕೈಪಿಡಿ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಶಿರಹಟ್ಟಿ ತಾಲೂಕಿನಲ್ಲಿ ನೂತನ ತಾಲೂಕು ಆಸ್ಪತ್ರೆ ನಿರ್ಮಾಣ ಆಗುತ್ತಿರುವುದು ಉತ್ತಮ ಬೆಳವಣಿಗೆ. ಒಂದೊಂದು ಆಸ್ಪತ್ರೆಯನ್ನೂ 30ರಿಂದ 40 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಆಸ್ಪತ್ರೆ ಒಳಗೊಳ್ಳಲಿದೆ. ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಪುನಃ ನಾವೇ ಆಸ್ಪತ್ರೆಯನ್ನು ಉದ್ಘಾಟಿಸುತ್ತೇವೆ ಎಂದು ಭರವಸೆ ನೀಡಿದರು.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ರಾಷ್ಟçದಲ್ಲೇ ಮೊದಲ ಬಾರಿಗೆ ಬಡತನವನ್ನು ಬೇರು ಮಟ್ಟದಿಂದ ಕಿತ್ತೊಗೆಯಲಾಗಿದೆ. ಒಂದು ಬಡ ಕುಟುಂಬಕ್ಕೆ ಪ್ರತಿ ತಿಂಗಳು ಕನಿಷ್ಠ 5 ಸಾವಿರ ರೂ ನೀಡುವ ಕೇಲಸವನ್ನು ರಾಜ್ಯ ಸರ್ಕಾರ ಶೇ. 99ರಷ್ಟು ಮಾಡಿದೆ. ಇದು ಕ್ರಾಂತಿಕಾರಕ ನಿರ್ಣಯವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್ ನೀಲಗುಂದ ಪ್ರಾಸ್ತಾವಿಕ ಮಾತನಾಡಿ, ರಾಜ್ಯಾದ್ಯಂತ ಆಗಸ್ಟ್ 14ರಿಂದ ಗೃಹ ಆರೋಗ್ಯ ಕಾರ್ಯಕ್ರಮ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳು ಮನೆ-ಮನೆಗೆ ತೆರಳಿ 30 ವರ್ಷ ಮೆಲ್ಪಟ್ಟವರಿಗೆ ಕಿಡ್ನಿ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಆರೋಗ್ಯದಲ್ಲಿ ಸಮಸ್ಯೆ ಇದ್ದಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಶಾಸಕ ಡಾ. ಚಂದ್ರು ಲಮಾಣಿ ವಹಿಸಿದ್ದರು. ಈ ಸಂದರ್ಭದಲ್ಲಿ ಮುಂಡರಗಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಶಿರಹಟ್ಟ ಪ.ಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಬಾಲೆಹೊಸೂರ ಗ್ರಾ.ಪಂ ಅಧ್ಯಕ್ಷೆ ಚನ್ನವ್ವ ಮೈಲಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷರಾದ ವೀರಯ್ಯ ಮಠಪತಿ, ನಾಗರಾಜ ಮಡಿವಾಳರ, ಅಶೋಕ ಮಂದಾಲಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಮಾಜಿ ಸಂಸದ ಐ ಜಿ ಸನದಿ, ಸುಜಾತಾ ದೊಡ್ಡಮನಿ, ಸಿ.ಸಿ ನೂರಶೇಟ್ಟರ, ನಾಗರಾಜ ಲಕ್ಕುಂಡಿ, ದೀಪಕ್ ಕಪ್ಪತ್ತನವರ, ಆನಂದಸ್ವಾಮಿ ಗಡ್ಡದೇವರಮಠ, ಹುಮಾಯಾನ್ ಮಾಗಡಿ, ಜಾನು ಲಮಾಣಿ, ನಾಗರಾಜ ಲಕ್ಕುಂಡಿ, ಡಿಸಿ ಸಿ.ಎನ್. ಶ್ರೀಧರ, ಸಿಇಓ ಭರತ್ ಎಸ್, ಎಸ್ಪಿ ರೋಹನ್ ಜಗದೀಶ್, ಆರೋಗ್ಯ ಇಲಾಖೆ ನಿರ್ದೇಶಕ ವಸಂತಕುಮಾರ್ ಕೆ, ಡಿಎಸ್‌ಓ ಡಾ. ವೆಂಕಟೇಶ ರಾಠೋಡ್ ಮುಂತಾದವರು ಉಪಸ್ಥಿತರಿದ್ದರು.
“1954ರಿಂದ ಶಿರಹಟ್ಟಿ ತಾಲೂಕು ಕೇಂದ್ರವಾಗಿದೆ. ಆದರೆ, ದೊಡ್ಡ ತಾಲೂಕ ಆಸ್ಪತ್ರೆ ಇರಲಿಲ್ಲ. ಇದರಿಂದ ವೈದ್ಯರು ಇಕ್ಕಟ್ಟಿನ ಜಾಗದಲ್ಲಿ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಇತ್ತು. ಈಗ ದೊಡ್ಡ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಸಂತೋಷದ ವಿಷಯವಾಗಿದೆ. ಬೆಳ್ಳಟ್ಟಿ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಮುಂಡರಗಿ ಆಸ್ಪತ್ರೆ ಸಿಬ್ಬಂದಿಗಳಿಗೆ ವಸತಿ ಗೃಹಗಳ ಅವಶ್ಯಕತೆ ಇದ್ದು, ಶೀಘ್ರದಲ್ಲೇ ನಿರ್ಮಿಸುವ ಭರವಸೆಯನ್ನು ಆರೋಗ್ಯ ಸಚಿವರು ನೀಡಿದ್ದಾರೆ”
– ಡಾ. ಚಂದ್ರು ಲಮಾಣಿ.
ಶಾಸಕರು, ಶಿರಹಟ್ಟಿ.
“ಮನೆ-ಮನೆಗೆ ಹೋಗಿ ಆರೋಗ್ಯ ವಿಚಾರಿಸುವ ಮಹತ್ವದ ಯೋಜನೆ `ಗೃಹ ಆರೋಗ್ಯ’ ಯೋಜನೆ. ದೀರ್ಘಕಾಲದ ಕಾಯಿಲೆಗಳಿಗೆ ಜೀವಾತಾವಧಿಯ ಕೊನೆಯವರೆಗೂ ಔಷಧಿ ನೀಡುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ಇದು ನಮ್ಮ ಸರ್ಕಾರದ ಬದ್ಧತೆಯಾಗಿದೆ”
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.