ಬೆಂಗಳೂರು:“ಗೌರವದಿಂದ ಇದ್ದರೆ ಸರಿ. ಇಲ್ಲ ಅಂದರೆ ಕಸ ವಿಲೇವಾರಿಗೆ ಅಡ್ಡಿ ಪಡಿಸುವವರು ಶಾಸಕರಾದರೂ ಸರಿ, ಬೇರೆ ಯಾರೇ ಆಗಿದ್ದರೂ ಸಹ ಎಸ್ಮಾ ಕಾಯ್ದೆ ಅಡಿ, ಯಾವುದೇ ಕರುಣೆ ಇಲ್ಲದೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಶಾಸಕರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಎದುರು ಲೋಡ್ ಕಸವನ್ನು ತೆಗೆದುಕೊಂದು ಹೋಗಿ ಹಾಕಬೇಕಾಗುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಕೆ ನೀಡಿದರು.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು. ಮಹದೇವಪುರದಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸಿರುವ ಬಗ್ಗೆ ಕೇಳಿದಾಗ, “ಶಾಸಕರು ಕಸ ಹಾಕಬಾರದು ಹಾಗೂ ನಮಗೆ ಅನುದಾನ ಬೇಕು ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.
ಮಂಗಳವಾರದಂದು ಅರವಿಂದ ಲಿಂಬಾವಳಿ, ಇಂದು ದೊಡ್ಡಬಳ್ಳಾಪುರ ಶಾಸಕರು ಬ್ಲಾಕ್ ಮೇಲ್ ಮಾಡಿದ್ದಾರೆ. ಹೀಗೆ ಮಾಡಿದರೆ ಕಸ ಎಲ್ಲಿಗೆ ಹೋಗಬೇಕು? ಕಸವು ಆರ್.ಅಶೋಕ್, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿಗೆ ಹೋಗಬೇಕಾಗುತ್ತದೆ. ಇವರುಗಳು ಯಾರಿಗೆ ಎಂದು ಬ್ಲಾಕ್ ಮೆಲ್ ಮಾಡುತ್ತಿದ್ದಾರೆ” ಎಂದರು.
ಯಾವ ಉದ್ದೇಶಕ್ಕೆ ಶಾಸಕರುಗಳು ಬ್ಲಾಕ್ ಮೆಲ್ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಈ ಹಿಂದಿನಿಂದ ಏನು ಕೆಲಸ ಮಾಡಿಕೊಂಡು ಬರಲಾಗುತ್ತಿತ್ತೊ ಅದೇ ಕೆಲಸವನ್ನು ಈಗಲೂ ಮಾಡಿಕೊಂಡು ಬರಲಾಗುತ್ತಿದೆ. ಅವರ ಕ್ಷೇತ್ರಗಳಿಗೆ ಅನುದಾನ ಬೇಕು ಎಂದು ಹೀಗೆ ಮಾಡುತ್ತಿದ್ದಾರೆ” ಎಂದು ಹೇಳಿದರು.
ಕಸದ ಲಾರಿಯಿಂದ ಅಪಘಾತವಾಗಿದೆ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅಪಘಾತ ಆಗಬಾರದಿತ್ತು ಆಗಿದೆ. ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಕಸ ವಿಲೇವಾರಿ ನಿಲ್ಲಿಸಿರುವುದು ಸರಿಯಲ್ಲ. ಎಸ್.ಟಿ.ಸೋಮಶೇಖರ್, ಶಿವಣ್ಣ, ಕೃಷ್ಣಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ಮಾಡಲಾಗುತ್ತಿದೆ” ಎಂದು ತಿಳಿಸಿದರು.
“ಈಗ ಹೊಸದಾಗಿ ಎರಡು ಜಾಗಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿ ಕಸ ವಿಲೇವಾರಿಗೆ ಕಾನೂನಿನ ಪ್ರಕಾರ ಟೆಂಡರ್ ಕರೆಯಲಾಗಿದೆ. ಒಂದಷ್ಟು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.



