ಬೆಂಗಳೂರು: ಮಳೆಯಿಂದ ಬೆಂಗಳೂರಿಗೆ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡ್ತೀವಿ ಎಂದು ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಮಳೆಹಾನಿ ಪೀಡಿತ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ಕೊಟ್ಟು ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ನಂತರ ಮಾತನಾಡಿದ ಡಿಸಿಎಂ, ಬೆಂಗಳೂರಿನಲ್ಲಿ ಮಳೆಯಿಂದಾಗಿರುವ ತೊಂದರೆ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ, ಒತ್ತುವರಿ ವಿಚಾರದಲ್ಲಿ ಅವರ ಕಾಲದಲ್ಲಿ ಏನು ಕೆಲಸ ಮಾಡುತ್ತಿದ್ದರು. ಒತ್ತುವರಿ ಮಾಡಿಕೊಂಡವರು ನ್ಯಾಯಾಲಯಗಳಿಂದ ತಡೆಯಾಜ್ಞೆ ತಂದಿದ್ದಾರೆ ಆದರೂ ನಾನು ಒತ್ತುವರಿಗಳನ್ನು ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಮಳೆ ನೀರಿನಿಂದ ತೊಂದರೆಗೆ ಒಳಗಾಗುತ್ತಿದ್ದ 211 ಪ್ರದೇಶಗಳನ್ನು ಗುರುತಿಸಿ 166 ಕ್ಕೆ ಇಳಿಸಿದ್ದೇವೆ. 44 ಕೆಲಸ ಬಾಕಿಯಿದ್ದು, ಇದರಲ್ಲಿ 24 ಕಡೆ ಕಾರ್ಯಪ್ರಗತಿಯಲ್ಲಿದೆ. ಮೊದಲಿಗಿಂತ ಈಗ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರದೇಶಗಳ ಪ್ರಮಾಣ ಕಡಿಮೆಯಾಗಿದೆ.
ಬೆಂಗಳೂರು ನಾಗರೀಕರ ರಕ್ಷಣೆ ಮಾಡಲಾಗುವುದು ಯಾರೂ ಆತಂಕಪಡುವ ಅಗತ್ಯವಿಲ್ಲ. ನಾವು ಬೆಂಗಳೂರಿಗೆ ಹೊಸ ರೂಪ ನೀಡುತ್ತಿದ್ದೇವೆ, ನಮ್ಮ ಸರ್ಕಾರ ಹಾಗೂ ಅಧಿಕಾರಿಗಳ ತಂಡ ಇದನ್ನು ಸರಿ ಮಾಡುತ್ತೆ ಎಂದು ಹೇಳಿದರು.


