ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶುಕ್ರವಾರ ಪಂಚ ಗ್ಯಾರಂಟಿ ಯೋಜನೆಗಳ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಕ್ತಿ ಯೋಜನೆಯ ಚರ್ಚೆಯಲ್ಲಿ, ಸಮಿತಿ ಸದಸ್ಯ ಶಿವರಾಜಗೌಡ ಪಾಟೀಲ ಲಕ್ಷ್ಮೇಶ್ವರದ ಸಾರಿಗೆ ಘಟಕದಲ್ಲಿ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಆಗ ಘಟಕ ವ್ಯವಸ್ಥಾಪಕಿ ಸವಿತಾ ಆದಿ ಪ್ರತಿಕ್ರಿಯಿಸಿ, ನಾನು ಯಾವುದೇ ಸಿಬ್ಬಂದಿಗೆ ಕಿರುಕುಳ ನೀಡುತ್ತಿಲ್ಲ. ಯಾರಿಂದಲೂ ಹಣ ಪಡೆಯದೇ ನಿಯತ್ತಿನಿಂದ ನೌಕರಿ ಮಾಡುತ್ತಿದ್ದೇನೆ. ಕಿರುಕುಳ ನೀಡುತ್ತೇನೆ ಎಂದ್ರೆ ಏನ್ರೀ ಅರ್ಥ ಎಂದು ಜೋರು ಧ್ವನಿಯಲ್ಲಿ ಪ್ರಶ್ನಿಸಿದರು. ಆಗ ಸಮಿತಿ ಸದಸ್ಯ ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಇಡೀ ಸಭೆ ಗೊಂದಲದ ಗೂಡಾಯಿತು.
ಸಭೆಯಲ್ಲಿದ್ದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಅವರು ಸಭೆಯಲ್ಲಿದ್ದ ಸಾರಿಗೆ ಇಲಾಖೆ ನಿಯಂತ್ರಣಾಧಿಕಾರಿ ಡಿ.ದೇವರಾಜ ಅವರಿಗೆ ಡಿಪೋ ಮ್ಯಾನೇಜರ್‌ಗೆ ನೋಟೀಸು ನೀಡುವಂತೆ ಸೂಚಿಸಿದರು. ನಂತರ ನಡೆದ ಚರ್ಚೆಯಲ್ಲಿ ಕಳೆದ 11 ತಿಂಗಳಿಂದ ಅನ್ನಭಾಗ್ಯ ಹಣ ಜಮೆಯಾಗಿಲ್ಲ ಎಂದು ಶಿಗ್ಲಿ ನಿವಾಸಿ ಜಗದೀಶ ನವಲೆ ಅಳಲು ತೋಡಿಕೊಂಡರು.
ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿ ಯೋಜನೆ ಬಡವರ ಜೀವನ ಮಟ್ಟವನ್ನು ಮೇಲ್ಪಂಕ್ತಿಗೇರಿಸಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಅರ್ಹ ಫಲಾನುಭವಿಗಳು ವಂಚಿತರಾಗಬಾರದು. ಯೋಜನೆಗಳನ್ನು ಬಡವರ ಮನೆಗೆ ತಲುಪಿಸುವ ಕಾರ್ಯವನ್ನು ಸಮಿತಿ ಮಾಡುತ್ತಿದೆ. ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಶೇ.98.02 ಗುರಿ ಸಾಧನೆಯಾಗಿದೆ. 2.49 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ತಲುಪಿಸಿದ್ದೇವೆ ಎಂದರು.
11 ಕೋಟಿ ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಿದ್ದು ದೊಡ್ಡ ಸಾಧನೆ. 100ಕ್ಕೆ 100ರಷ್ಟು ಗುರಿ ತಲುಪಲು ಪ್ರಯತ್ನ ಮಾಡಿ ಯೋಜನೆಗಳ ಕುರಿತು ಟೀಕೆ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತೇವೆ. ಜಿಲ್ಲೆಯ ಏಳೂ ತಾಲೂಕಿನ ಪಂಚ ಗ್ಯಾರಂಟಿಗಳ ಅಧ್ಯಕ್ಷರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಯೋಜನೆಯಿಂದ ವಂಚಿತರಾದವರನ್ನು ಭೇಟಿ ಮಾಡಿ ಅವರಿಗೂ ಯೋಜನೆ ತಲುಪಿಸುವ ಕೆಲಸ ನಡೆದಿದೆ ಎಂದು ತಿಳಿಸಿದರು.
ತಾ.ಪಂ ಇಓ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ 5 ಇಲಾಖೆಗಳ ಅಧಿಕಾರಿಗಳು ಮುಂದಿನ ದಿನಗಳನ್ನು ನಡೆಯುವ ಸಮಿತಿ ಸಭೆಯಲ್ಲಿ ಪ್ರಗತಿ ವರದಿ ಮಂಡಿಸಬೇಕು. ಏನಾದರೂ ಸಮಸ್ಯೆ ಇದ್ದಲ್ಲಿ ತಿಳಿಸಿದರೆ ಅವುಗಳನ್ನು ತಾಲೂಕು ಮತ್ತು ಜಿಲ್ಲಾಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ದೀಪಕ ಲಮಾಣಿ, ಸದಸ್ಯರಾದ ರಾಮಣ್ಣ ಲಮಾಣಿ, ಗೀತಾ ಬೀರಣ್ಣವರ, ಕಾರ್ತಿಕ ದೊಡ್ಡಮನಿ, ಪ್ರಕಾಶ ಹುಲಕೋಟಿ, ವಿಜಯ ಹಳ್ಳಿ, ಲಕ್ಷ್ಮೇಶ್ವರ ಪುರಸಭೆ ಅಶ್ರಯ ಸಮಿತಿ ಸದಸ್ಯ ತಿಪ್ಪಣ್ಣ ಸಂಶಿ, ವಿಜಯಕುಮಾರ ಹಳ್ಳಿ, ಸುಶೀಲವ್ವ ಬಡಿಗೇರ ಮತ್ತಿತರರು ಇದ್ದರು.
ಪಡಿತರ ಅಂಗಡಿಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಬ್ಯಾನರ್ ಹಾಕಿಸಬೇಕು. ಅನ್ನಭಾಗ್ಯ ಅಕ್ಕಿ ಕಾಳ ಸಂತೆಯಲ್ಲಿ ಎಗ್ಗಿಲ್ಲದೆ ಮಾರಾಟ ಆಗುತ್ತಿದೆ. ಈ ಕುರಿತು ಎಷ್ಟು ಪ್ರಕರಣ ದಾಖಲಿಸಿಕೊಂಡಿದ್ದೀರಿ ಎಂದು ಅಧಿಕಾರಿಯನ್ನು ಪ್ರಶ್ನಿಸಿದ ಬಿ.ಬಿ. ಅಸೂಟಿ, ಅಕ್ಕಿ ಮಾರಾಟ ಮಾಡುವವರ ಪಡಿತರ ಕಾರ್ಡ್ಗಳನ್ನು ರದ್ದುಪಡಿಸಿ ಎಂದು ಸೂಚಿಸಿದರು.
“ಐದೂ ಯೋಜನೆಗಳು ಶೇ.98ರಷ್ಟು ಜನರಿಗೆ ತಲುಪುವಂತೆ ನಮ್ಮ ಸಮಿತಿ ಸದಸ್ಯರು ಮತ್ತು ಕೆಡಿಪಿ ಸದಸ್ಯರು ಮಾಡಿದ್ದೇವೆ. ಇನ್ನೂ ಯೋಜನೆಗಳಿಂದ ವಂಚಿತರಾದವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿ, ಅವರಿಗೂ ಯೋಜನೆ ಲಾಭ ಮುಟ್ಟಿಸುತ್ತೇವೆ. ಲಕ್ಷ್ಮೇಶ್ವರದ ಬಸ್ ನಿಲ್ದಾಣದಲ್ಲಿ ಶೌಚಾಲಯದ ವ್ಯವಸ್ಥೆ ಸರಿಯಿಲ್ಲ. ವಿಕಲಚೇತನರಿಗೆ ಶೌಚಾಲಯ ಇಲ್ಲ. ಸಿಬ್ಬಂದಿಗಳ ಕೊರತೆಯಿದ್ದು, ಹೆಚ್ಚಿನ ಸಿಬ್ಬಂದಿಗಳನ್ನು ಕೊಡಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್ ಓಡಿಸಲು ಕ್ರಮ ಕೈಗೊಳ್ಳಬೇಕು”
– ನಾಗರಾಜ ಮಡಿವಾಳರ.
ಪಂಚ ಗ್ಯಾರಂಟಿ ಯೋಜನೆಗಳ ತಾಲೂಕಾಧ್ಯಕ್ಷ.