ಟೆಹ್ರಾನ್: ಇಂದು ರಾತ್ರಿ ಇಡೀ ಇರಾನ್ ದೇಶ ನಾಶವಾಗಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಗೆ ಇರಾನ್ ಪ್ರತ್ಯುತ್ತರ ಕೊಟ್ಟಿದೆ.
ನಾವು ನಿಮ್ಮ ಬೆದರಿಕೆಗೆ ಹೆದರುವುದಿಲ್ಲ, ನಮ್ಮ ದಾಳಿಗಳನ್ನು ದ್ವಿಗುಣಗೊಳಿಸುತ್ತೇವೆ, ನಾವೆಂದೂ ಹಿಂಜರಿಯುವುದಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೇ ಟ್ರಂಪ್ ಅವರ ಇತ್ತೀಚಿನ ಬೆದರಿಕೆಗಳ ನಂತರ ಎಲ್ಲಾ ರಾಜತಾಂತ್ರಿಕ ಮಾರ್ಗಗಳು ಮತ್ತು ಪರೋಕ್ಷ ಮಾತುಕತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ.
ದಕ್ಷಿಣ ಆಫ್ರಿಕಾದಲ್ಲಿರುವ ಇರಾನಿನ ರಾಯಭಾರ ಕಚೇರಿಯು ಎಕ್ಸ್ನಲ್ಲಿ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, “ನೀವು ಮತ್ತು ನಿಮ್ಮ ಮಿತ್ರರಾಷ್ಟ್ರಗಳು ಇರಾನ್ನ ಪ್ರಾಚೀನ ನಾಗರಿಕತೆಯಿಂದ ಮರೆಯಲಾಗದ ಹೊಡೆತವನ್ನು ಅನುಭವಿಸುವಿರಿ” ಎಂದು ಹೇಳಿದೆ. ಫೆಬ್ರವರಿಯಲ್ಲಿ ಯುಎಸ್-ಇಸ್ರೇಲಿ ದಾಳಿಯ ಸಮಯದಲ್ಲಿ ಮಿನಾಬ್ನಲ್ಲಿ ಕೊಲ್ಲಲ್ಪಟ್ಟ ಮಗುವಿನ ದುಃಖಿತ ತಾಯಿಯ ಚಿತ್ರವನ್ನು ಸಹ ರಾಯಭಾರ ಕಚೇರಿ ಹಂಚಿಕೊಂಡಿದೆ.
ಇದು ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರ ಮತ್ತು ಪ್ರಾಥಮಿಕ ಶಾಲೆಯ ಮೇಲೆ ಕ್ಷಿಪಣಿ ದಾಳಿಗಳನ್ನು ಗುರಿಯಾಗಿಸಿಕೊಂಡ ದಾಳಿಯಾಗಿತ್ತು. ಈ ದಾಳಿಯಲ್ಲಿ ಸುಮಾರು 170 ಶಾಲಾ ಹುಡುಗಿಯರು ಸಾವನ್ನಪ್ಪಿದ್ದರು. “ಈ ದುಃಖ, ಈ ಕೋಪ, ಈ ಮುಖವನ್ನು ನೆನಪಿಟ್ಟುಕೊಳ್ಳಿ. ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ” ಎಂದು ರಾಯಭಾರ ಕಚೇರಿಯು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
“ಅಮೆರಿಕನ್ ಭಯೋತ್ಪಾದಕ ಸೇನೆಯು ಕೆಂಪು ರೇಖೆಗಳನ್ನು ದಾಟಿದರೆ ನಮ್ಮ ಪ್ರತಿಕ್ರಿಯೆಯು ಬೇರೆಯದೇ ರೀತಿ ಇರುತ್ತದೆ. ನಾವು ನಾಗರಿಕ ಸೌಲಭ್ಯಗಳ ಮೇಲಿನ ಹೇಯ ಆಕ್ರಮಣಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹಿಂಜರಿಯುವುದಿಲ್ಲ” ಎಂದು IRGC ತಿಳಿಸಿದೆ.



