ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ವೈದ್ಯಕೀಯ ಕಾರಣದಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ.ಬೆನ್ನು ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕೋರ್ಟ್ ಆರು ವಾರಗಳ ಕಾಲ ಮಂಧ್ಯಂತರ ಜಾಮೀನು ಮಂಜೂರು ಮಾಡಿದೆ. ಸದ್ಯ ದರ್ಶನ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ನಿನ್ನೆ ಹೈಕೋರ್ಟ್ ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು ವಿಚಾರಣೆಯನ್ನು ಮತ್ತೆ ಮುಂದಾಡಲಾಗಿದೆ. ಇತ್ತ ದರ್ಶನ್ ಕೇಸ್ ಬಗ್ಗೆ ಮಾತಾಡಿದ ಗೃಹ ಸಚಿವ ಪರಮೇಶ್ವರ್ ದರ್ಶನ್ಗೆ ಬೇಲ್ ಕೊಡಬಾರದು ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ.
ನಟ ದರ್ಶನ್ ಕೇಸ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ್, ದರ್ಶನ್ ಅವರು ಚಿಕಿತ್ಸೆ ಪಡೆಯಲೆಂದು ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. 3 ವಾರಗಳ ಕಾಲಾವಕಾಶದಲ್ಲಿ ಚಿಕಿತ್ಸೆ ಪಡೆದು ಮತ್ತೆ ದರ್ಶನ್ ಜೈಲು ಸೇರಬೇಕಾಗುತ್ತದೆ ಎಂದು ಪರಮೇಶ್ವರ್ ಹೇಳಿದ್ರು.
ಅದಕ್ಕೂ ಮುನ್ನ ಮತ್ತೆ ದರ್ಶನ್ ಬೇಲ್ ಕೇಳಬಹುದು, ವಿಚಾರಣೆ ನಡೆಯಬಹುದು. ನಾವು ಕೂಡ ದರ್ಶನ್ಗೆ ಬೇಲ್ ಕೊಡಬಾರದು ಅಂತ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕುತ್ತೇವೆ. ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಕೂಡ ನಡೆದಿದೆ ಎಂದರು.
ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ದರ್ಶನ್ ಬೇಲ್ ಅರ್ಜಿ ವಿಚಾರಣೆ ನಡೆಯಿತು. ದರ್ಶನ್ ಕೇಸ್ನ ಹೆಚ್ಚುವರಿ ಆರೋಪ ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಲಾಗಿದೆ. ಇದೇ ವೇಳೆ ನಟ ದರ್ಶನ್ ಅವರ ವೈದ್ಯಕೀಯ ವರದಿಯನ್ನು ತಮಗೆ ನೀಡಿಲ್ಲವೆಂದು ಎಸ್ ಪಿಪಿ ವಾದ ಮಂಡಿಸಿದ್ರು. ದರ್ಶನ್ ಪರ ವಕೀಲರಾದ ನಾಗೇಶ್ ಅವರು ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ರು. ಬಳಿಕ ದರ್ಶನ್ ವೈದ್ಯಕೀಯ ವರದಿ ನ್ಯಾ. ವಿಶ್ವಜಿತ್ ಶೆಟ್ಟಿ ಪರಿಶೀಲಿಸಿದ್ರು. ಇದರ ಒಂದು ಪ್ರತಿಯನ್ನು ಎಸ್ಪಿಪಿ ಪ್ರಸನ್ನ ಕುಮಾರ್ ಅವರಿಗೆ ನೀಡಲು ನ್ಯಾಯ ಮೂರ್ತಿಗಳು ಸೂಚನೆ ನೀಡಿದರು.
ಬೆನ್ನು ನೋವಿನ ಹಿನ್ನೆಲೆಯಲ್ಲಿ ಸರ್ಜರಿ ಮಾಡಿಸಿಕೊಳ್ಳಲು ದರ್ಶನ್ ಗೆ ಆರು ವಾರಗಳ ಮಂಧ್ಯಂತರ ಜಾಮೀನು ನೀಡಲಾಗಿದೆ. ಆದರೆ ಇದುವರೆಗೂ ದರ್ಶನ್ ಯಾವುದೇ ಸರ್ಜರಿಗೆ ಒಳಗಾಗಿಲ್ಲ. ಜೊತೆಗೆ ಸರ್ಜರಿ ದಿನಾಂಕವನ್ನು ತಿಳಿಸಲಿಲ್ಲವೆಂದು ಎಸ್ ಪಿ ಪ್ರಸನ್ನ ಕುಮಾರ್ ದರ್ಶನ್ ಜಾಮೀನು ಅರ್ಜಿ ವಿಚಾರಣೆ ವೇಳೆ ಪ್ರಶ್ನೆ ಮಾಡಿದ್ರು. ಬಳಿಕ ದರ್ಶನ್ ಪರ ವಕೀಲರು ಎಸ್ಪಿಪಿಗೂ ದರ್ಶನ್ ವೈದ್ಯಕೀಯ ವರದಿಯ ಪ್ರತಿಯನ್ನು ನೀಡಿದ್ರು. ಕೆಲ ಕಾಲ ವಾದ ಆಲಿಸಿದ ನ್ಯಾಯಾದೀಶರು ಅರ್ಜಿ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿದ್ದಾರೆ.